ಆಲಿಗಢ: ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ದ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿತೇಂದ್ರ ಕುಮಾರ್ ಅವರು ವಿಧಿವಿಜ್ಞಾನ ಶಾಸ್ತ್ರದ ಕುರಿತು ಪಾಠ ಹೇಳುವ ಸಂದರ್ಭ ಹಿಂದೂ ಪುರಾಣಗಳಲ್ಲಿ 'ಅತ್ಯಾಚಾರ'ದ ಕುರಿತಾದ ಉದಾಹರಣೆಗಳನ್ನು ನೀಡಿದ್ದರು ಎಂದು ಎಎಂಯು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಕುರಿತಾಗಿ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ವಿಶ್ವವಿದ್ಯಾಲಯ ನೇಮಿಸಿದೆ. ಕುಮಾರ್ ಅವರ ವಿಚಾರಣೆಯ ಫಲಿತಾಂಶ ಹೊರಬರುವ ಮೊದಲೇ ಅವರನ್ನು ಅಮಾನತ್ತು ಮಾಡಲಾಗಿದೆ. ಪ್ರಕರಣದ ಗಂಭೀರತೆ ಮತ್ತು ಪ್ರಾಥಮಿಕ ಸಾಕ್ಷ್ಯಗಳನ್ನು ಆಧರಿಸಿ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಪ್ರಕರಣದ ಕುರಿತು ನೋಟಿಸ್ ಜಾರಿಯಾದಂತೆ ಕ್ಷಮೆ ಯಾಚಿಸಿರುವ ಕುಮಾರ್ ಎಎಂಯು ಉಪಕುಲಪತಿ ತಾರಿಕ್ ಮನ್ಸೂರ್ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
'ಯಾವುದೇ ಧರ್ಮದವರಿಗೆ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ಬಹಳ ಹಿಂದೆಯೇ ನಮ್ಮ ಸಮಾಜದಲ್ಲಿ ಅತ್ಯಾಚಾರ ನಡೆಯುತ್ತ ಬಂದಿದೆ ಎಂಬುದನ್ನು ವಿವರಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಇದೊಂದು ಉದ್ದೇಶಪೂರ್ವಕವಲ್ಲದ ತಪ್ಪಾಗಿದೆ. ಇಂತಹ ತಪ್ಪುಗಳು ಭವಿಷ್ಯದಲ್ಲಿ ಮರುಕಳಿಸುವುದಿಲ್ಲ' ಎಂದು ಕುಮಾರ್ ಅವರು ಕ್ಷಮಾಪಣೆ ಪತ್ರದಲ್ಲಿ ವಿವರಿಸಿದ್ದಾರೆ.
ಉಪನ್ಯಾಸದ ವೇಳೆ ಸ್ಲೈಡ್ ಶೋ ಅನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ಮತ್ತು ಬೋಧಕ ಸಿಬ್ಬಂದಿಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವರು ಸಾಮಾಜಿಕ ತಾಣಗಳಲ್ಲಿ ಉಪನ್ಯಾಸದ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದರು. ಬೆನ್ನಲ್ಲೇ ವಿವಾದವು ತಲೆದೂರಿತ್ತು.
ವೈದ್ಯಕೀಯ ವಿಭಾಗದ ಡೀನ್ ಪ್ರೋಫೆಸರ್ ರಾಕೇಶ್ ಭಾರ್ಗವ ಅವರ ಸೂಚನೆ ಮೇರೆಗೆ ಡಾ. ಕುಮಾರ್ ಅವರ ವಿರುದ್ಧ ಎಎಂಯು ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
'ತರಗತಿಯಲ್ಲಿ ಅತ್ಯಾಚಾರ ಕುರಿತು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಪವರ್‌ಪಾಯಿಂಟ್ ಸ್ಲೈಡ್ ಶೋ ತೋರಿಸಿದ್ದೀರಿ. ಈ ಮೂಲಕ ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದ್ದೀರಿ. ಹಾಗಾಗಿ ಸಾಧ್ಯವಾಗುವ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು' ಎಂದು ನೋಟಿಸ್‌ನಲ್ಲಿ ಎಎಂಯು ಕುಲಸಚಿವ ಅಬ್ದುಲ್ ಹಮಿದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.