ADVERTISEMENT

‘ಹುಲಿ ಯೋಜನೆ’ ಸಾಕಾರಗೊಳ್ಳಲು ಕಾರಣ ಇಂದಿರಾ ಗಾಂಧಿ: ಜೈರಾಮ್ ರಮೇಶ್

ಪಿಟಿಐ
Published 29 ಜುಲೈ 2024, 9:47 IST
Last Updated 29 ಜುಲೈ 2024, 9:47 IST
<div class="paragraphs"><p>ಹುಲಿ ಮರಿಯೊಂದಿಗೆ ಇಂದಿರಾ ಗಾಂಧಿ</p></div>

ಹುಲಿ ಮರಿಯೊಂದಿಗೆ ಇಂದಿರಾ ಗಾಂಧಿ

   

ಚಿತ್ರಕೃಪೆ: ಜೈರಾಮ್ ರಮೇಶ್‌ ‘ಎಕ್ಸ್‌’

ನವದೆಹಲಿ: ‘ಹುಲಿ ಯೋಜನೆ’(Project Tiger) ಸಾಕಾರಗೊಳ್ಳಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ADVERTISEMENT

ಅಂತರಾಷ್ಟ್ರೀಯ ಹುಲಿ ದಿನದ ಪ್ರಯುಕ್ತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಹುಲಿ ಮರಿಗಳ ಜೊತೆ ಇಂದಿರಾ ಗಾಂಧಿ ಅವರು ಕುಳಿತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

‘ಹುಲಿ ಯೋಜನೆ ಸಾಕಾರಗೊಂಡಿದೆ ಎಂದರೆ ಅದರ ಹಿಂದೆ ಇದ್ದದ್ದು ಒಬ್ಬ ಮಹಿಳೆ(ಇಂದಿರಾ ಗಾಂಧಿ). ಪರಿಸರವಾದಿಯೂ ಆಗಿರುವ ಆ ಮಹಿಳೆ ಹುಲಿಗಳನ್ನು ರಕ್ಷಿಸುವ ಮೂಲಕ ನಾವು ನಮ್ಮ ಶ್ರೀಮಂತ ಅರಣ್ಯ ಪರಿಸರವನ್ನು ಸಂರಕ್ಷಿಸಬಹುದು ಎಂದು ನಂಬಿದ್ದರು’ ಎಂದು ಹೇಳಿದ್ದಾರೆ.

‘ಅವರ(ಇಂದಿರಾ ಗಾಂಧಿ) ಈ ಕಾರ್ಯಕ್ಕೆ ದೇಶ ಮತ್ತು ವಿದೇಶಗಳಲ್ಲಿನ ಹಲವಾರು ಪರಿಸರವಾದಿಗಳು ಸಹಕಾರ ನೀಡಿದ್ದರು. ಹುಲಿ ಸಂರಕ್ಷಣೆ ಬಗ್ಗೆ ಇಂದಿರಾ ಗಾಂಧಿ ಅವರು ವೈಯಕ್ತಿಕವಾಗಿ ಆಸಕ್ತಿ ತೋರಿಲ್ಲವೆಂದಿದ್ದರೆ ಇಂದು ಹುಲಿ ಯೋಜನೆ ಜಾರಿಗೆ ಬರುತ್ತಿರಲಿಲ್ಲ’ ಎಂದಿದ್ದಾರೆ.

‘ಇಂದು 55 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚಿನವು ತೀವ್ರ ಅಪಾಯವನ್ನು ಎದುರಿಸುತ್ತಿವೆ. ಹವಾಮಾನ ವೈಪರೀತ್ಯ ಒಂದು ಕಡೆಯಾದರೆ, ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ನಡೆಸುವ ಅಭಿವೃದ್ಧಿ ಕೆಲಸಗಳು ಹುಲಿಗಳ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ(ಜುಲೈ 28) ‘ಮನ್‌ ಕಿ ಬಾತ್‌’ (ಮನದ ಮಾತು) ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ವಿಶ್ವದಲ್ಲಿರುವ ಒಟ್ಟು ಹುಲಿಗಳಲ್ಲಿ ಶೇ 70ರಷ್ಟು ಹುಲಿಗಳು ಭಾರತದಲ್ಲಿದ್ದು, ಇದು ಜನರಲ್ಲಿ ಹೆಮ್ಮೆ ಮೂಡಿಸುತ್ತದೆ’ ಎಂದು ಹೇಳಿದ್ದರು.

1973ರ ಏಪ್ರಿಲ್ 1ರಂದು ಹುಲಿ ಸಂರಕ್ಷಣೆಯನ್ನು ಉತ್ತೇಜಿಸಲು ಭಾರತವು ‘ಪ್ರಾಜೆಕ್ಟ್ ಟೈಗರ್’(ಹುಲಿ ಯೋಜನೆ) ಅನ್ನು ಪ್ರಾರಂಭಿಸಿತು. ಆರಂಭದಲ್ಲಿ, ಇದು 18,278 ಚದರ ಕಿಲೋಮೀಟರ್‌ಗಳಷ್ಟು ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿತ್ತು. ಇಂದು ಇದರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.