ನವದೆಹಲಿ: ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ಸದ್ದುಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಮಕ್ಕಳಾದ ಈ ಇಬ್ಬರ ನಡುವಿನ ಪತ್ರ ಸಮರದಲ್ಲಿ, ತಂದೆಯ ನೆನಪುಗಳೊಂದಿಗೆ, ವೈಯಕ್ತಿ ಆರೋಪ ಹಾಗೂ ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿದೆ.
2012ರ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಗೆಲುವಿಗೆ ಶರ್ಮಿಳಾ ಪಣ ತೊಟ್ಟು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 2019ರ ಪೂರ್ವದಲ್ಲೂ ಶರ್ಮಿಳಾ ಅವರು ವೈಎಸ್‌ಆರ್‌ಸಿಪಿ ಪರವಾಗಿ ಪ್ರಚಾರ ನಡೆಸಿದ್ದರು. ಈ ಎರಡೂ ಬಾರಿ ಜಗನ್‌ಗೆ ಗೆಲುವು ಲಭಿಸಿತ್ತು.
ಆದರೆ ಸರಸ್ವತಿ ಪವರ್ ಕಂಪನಿಯ ಷೇರುಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಜಗನ್ ಬರೆದ ಪತ್ರ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಯಿತು. ಇದಾದ ನಂತರ ಶರ್ಮಿಳಾ ಕಾಂಗ್ರೆಸ್ ಸೇರಿದರು. ಸದ್ಯ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದಾರೆ.
ಈ ಕುರಿತು ಪತ್ರ ಬರೆದಿದ್ದ ಜಗನ್, ‘ನನಗೆ ಹಂಚಿಕೆಯಾದ ಷೇರುಗಳು ಗಿಫ್ಟ್ ಡೀಡ್ ಅಡಿಯಲ್ಲಿ ತಾಯಿ ವೈ.ಎಸ್. ವಿಜಯಲಕ್ಷ್ಮಿ ಅವರಿಂದ ಬಂದಿವೆ. ಈ ವರ್ಗಾವಣೆಯು ಸೂಕ್ತ ದಾಖಲಾತಿ ಹಾಗೂ ನ್ಯಾಯಾಲಯದ ಆದೇಶಕ್ಕೆ ಅನ್ವಯಿಸಲಿದೆ’ ಎಂದಿದ್ದಾರೆ.
ತಮ್ಮ ಎರಡು ಪುಟಗಳ ಪತ್ರದಲ್ಲಿ ಅವರು ಒಂಭತ್ತು ಬಾರಿ ‘ಪ್ರೀತಿ ಮತ್ತು ವಾತ್ಸಲ್ಯ’ ಎಂಬ ವಾಕ್ಯವನ್ನು ಬಳಸಿದ್ದಾರೆ. ವಂಚನೆ ಮೂಲಕ ತನಗೆ ಕಾನೂನು ತೊಡಕುಗಳನ್ನು ಸೋದರಿ ಸೃಷ್ಟಿಸಿದ್ದಾರೆ ಎಂದು ಜಗನ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
‘ಸೋದರಿ ಎಂಬ ಪ್ರೀತಿ ಮತ್ತು ವಾತ್ಸಲ್ಯದಿಂದ 2019ರಲ್ಲಿ ಕೆಲವೊಂದು ಆಸ್ತಿಗಳನ್ನು ವರ್ಗಾಯಿಸಿದ್ದೇನೆ. ಇದಕ್ಕಾಗಿ ಇಬ್ಬರೂ ಪರಸ್ಪರ ಒಪ್ಪಂದವನ್ನೂ ಮಾಡಿಕೊಂಡಿದ್ದೆವು. ಆದರೆ ನಮ್ಮ ಮೂಲ ಒಪ್ಪಂದದಂತೆ ನಡೆಯುವ ಯಾವುದೇ ಇರಾದೆ ನನಗಿಲ್ಲ’ ಎಂದೂ ಹೇಳಿದ್ದಾರೆ.
ಜಗನ್ ಅವರ ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಶರ್ಮಿಳಾ, ‘ನನ್ನ ತಂದೆ ಅವರ ಜೀವತಾವಧಿಯಲ್ಲಿ ಕುಟುಂಬ ಹೊಂದಿದ ಆಸ್ತಿಯನ್ನು ತನ್ನ ಮಕ್ಕಳು ಹಾಗೂ ನಾಲ್ವರು ಮೊಮಕ್ಕಳಿಗೆ ಹಂಚಬೇಕು ಎಂಬ ಉದ್ದೇಶ ಹೊಂದಿದ್ದರು. ತಂದೆ ಬದುಕಿದ್ದಾಗ, ಅವರ ಮಾತಿಗೆ ಒಪ್ಪಿದ್ದ ಅಣ್ಣ, ಅವರ ನಿಧನ ನಂತರ ಅದನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ನಮ್ಮ ತಾಯಿಯೇ ಸಾಕ್ಷಿ’ ಎಂದಿದ್ದಾರೆ.
‘ಪ್ರೀತಿ ಮತ್ತು ವಾತ್ಸಲ್ಯದ ಹೆಸರಿನಲ್ಲಿ ಯಾವುದೇ ಆಸ್ತಿಯನ್ನು ವರ್ಗಾಯಿಸುವುದು ಕೇವಲ ತಮ್ಮ ತಂದೆಯ ಕೊನೆ ಆಸೆಯ ಭಾಗಶಃ ಈಡೇರಿಕೆಯಷ್ಟೇ ಆಗಲಿದೆ. ಭಾರತಿ ಸಿಮೆಂಟ್ಸ್ ಮತ್ತು ಸಾಕ್ಷಿ ಕಂಪನಿಯಲ್ಲಿನ ಹೆಚ್ಚಿನ ಪಾಲನ್ನು ತಾವೇ ಇಟ್ಟುಕೊಳ್ಳುವ ಮೂಲಕ ನನಗೆ ಬರಬೇಕಾಗಿದ್ದನ್ನು ಕಸಿದುಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ.
‘ನಮ್ಮ ತಂದೆ ಎಂದೂ ಆಲೋಚಿಸದ್ದನ್ನು ನೀವು ಮಾಡಿದ್ದೀರಿ. ತಾಯಿ ವಿರುದ್ಧ ದಾವೆ ಹೂಡಿದ್ದೀರಿ. ನನಗೆ ನ್ಯಾಯಯುತವಾಗಿ ಬರಬೇಕಾದ ಆಸ್ತಿಯನ್ನು ಕಸಿದುಕೊಂಡಿದ್ದೀರಿ’ ಎಂದು ದೂರಿದ್ದಾರೆ.
ಸರಸ್ವತಿ ಪವರ್‌ನ ಷೇರುಗಳ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಎಲ್ಲಾ ಪಾಲುದಾರರಿಗೆ ನೋಟಿಸ್ ಜಾರಿ ಮಾಡಿದ್ದು, ನ. 8ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.