ಪುಣೆ (ಪಿಟಿಐ): ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರಗಳ ವಿಚಾರಣೆಯನ್ನು ಅಂತಿಮಗೊಳಿಸಿರುವುದಾಗಿ ಪ್ರಾಸಿಕ್ಯೂಷನ್ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಸಾಕ್ಷ್ಯಾಧಾರಗಳು ಮತ್ತು ಅಂತಿಮ ವರದಿಯನ್ನು ಪ್ರಾಸಿಕ್ಯೂಷನ್ ಸಲ್ಲಿಸುವ ಬಗ್ಗೆ ನ್ಯಾಯಾಲಯವು ಈಗ ಪ್ರತಿವಾದಿಗಳಿಗೆ ಹೇಳಿಕೆಯನ್ನು ಸಲ್ಲಿಸಲು ಸೂಚಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಕಾಶ್ ಸೂರ್ಯವಂಶಿ ಗುರುವಾರ ಹೇಳಿದರು.
ವಿಶೇಷ ನ್ಯಾಯಾಧೀಶ ಪಿ.ಪಿ. ಜಾಧವ್ ಅವರಿಗೆ ಪ್ರಾಸಿಕ್ಯೂಷನ್ ಕಾರ್ಯವಿಧಾನದ ಭಾಗವಾಗಿ ಬುಧವಾರ ವಾಸ್ತವಾಂಶದ ಲಿಖಿತ ಹೇಳಿಕೆ ಸಲ್ಲಿಸಿದೆ. ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಕ್ತಾಯಗೊಳಿಸಿ, ಇಡೀ ತನಿಖೆಯ ಅಂತಿಮ ವರದಿಯ ಸಾರಾಂಶವನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ ಎಂದು ಸೂರ್ಯವಂಶಿ ಹೇಳಿದರು.
2013ರ ಆಗಸ್ಟ್ 20ರಂದು ಪುಣೆಯಲ್ಲಿ ಬೆಳಿಗ್ಗೆ ವಾಯು ವಿಹಾರ ನಡೆಸುತ್ತಿದ್ದ ದಾಭೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ವೀರೇಂದ್ರ ಸಿಂಹ ತಾವಡೆ, ಸಚಿನ್ ಅಂದುರೆ, ಶರದ್ ಕಲಾಸ್ಕರ್, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
‘ಆರೋಪಿಗಳಾದ ಮನೀಶ್ ನಾಗೋರಿ, ವಿಕಾಸ್ ಖಾಂಡೇಲ್ವಾಲ್, ಅಮೋಲ್ ಕಾಳೆ, ರಾಜೇಶ್ ಬಂಗೇರಾ ಮತ್ತು ಅಮಿತ್ ದೇಗ್ವೇಕರ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಿಗಳನ್ನು ಗುರುತಿಸುವ ಪರೀಕ್ಷೆ ವೇಳೆ ನಾಗೋರಿ ಮತ್ತು ಖಾಂಡೇಲ್ವಾಲ್ ಅವರನ್ನು ಯಾರೂ ಗುರುತಿಸಲಿಲ್ಲ. ಈ ಐವರಿಗೂ ಜಾಮೀನು ಸಿಕ್ಕಿದೆ. ಇದನ್ನು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸೂರ್ಯವಂಶಿ ಹೇಳಿದರು.
ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿ ಶಸ್ತ್ರಾಸ್ತ್ರ ಮಾರಾಟಗಾರರಾದ ನಾಗೋರಿ ಮತ್ತು ಖಾಂಡೇಲ್ವಾಲ್ ಅವರನ್ನು 2013ರ ನವೆಂಬರ್‌ನಲ್ಲಿ ಪುಣೆ ಪೊಲೀಸರು ಬಂಧಿಸಿದ್ದರೆ, 2018ರಲ್ಲಿ ಕಾಳೆ, ಬಂಗೇರಾ ಮತ್ತು ದೇಗ್ವೇಕರ್ ಅವರನ್ನು ಸಿಬಿಐ ಬಂಧಿಸಿತ್ತು. ಆದರೆ, 90 ದಿನಗಳ ಅವಧಿಯಲ್ಲಿ ಸಿಬಿಐ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಐವರಿಗೂ ಜಾಮೀನು ಸಿಕ್ಕಿದೆ.
ಪ್ರತಿವಾದಿಗಳಿಗೆ ಹೇಳಿಕೆಯನ್ನು ಪಡೆದ ನಂತರ, ಅಪರಾಧ ಪ್ರಕ್ರಿಯೆ ಸಂಹಿತೆ 313 (ಸಿ) ಅಡಿಯಲ್ಲಿ ಆರೋಪಿಯ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ನ್ಯಾಯಾಲಯವು ವಿಚಾರಣೆಯಲ್ಲಿ ಯಾವುದೇ ಸಾಕ್ಷಿಗಳನ್ನು ಹಾಜರುಪಡಿಸಲು ಬಯಸುತ್ತೀರಾ ಎಂದು ಪ್ರತಿವಾದಿಯನ್ನು ಕೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.