ನವದೆಹಲಿ: ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ರಾಜ್ಯದ ವೈಶಿಷ್ಯತೆಯ ಹೆಗ್ಗುರುತುಗಳನ್ನು ಸಂರಕ್ಷಿಸುವಂತೆ ನಟಿ ಹಾಗೂ ಸಂಸದೆ ಕಂಗನಾ ರನೌತ್ ಸಂಸತ್ತಿನಲ್ಲಿ ಗುರುವಾರ ಹೇಳಿದ್ದಾರೆ.
ಲೋಕಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಂಡಿ ಸಂಸದೆ ಕಂಗನಾ ರನೌತ್ ಅವರು ಹಿಮಾಚಲ ಪ್ರದೇಶದ ಕಲಾ ಪ್ರಕಾರಗಳನ್ನು, ಗಿರಿ ಜನರ ಸಂಪ್ರದಾಯ ಹಾಗೂ ಅಲ್ಲಿನ ವಿಶಿಷ್ಟತೆಯನ್ನು ಸಂರಕ್ಷಿಸುವಂತೆ ಸಂಸತ್ತಿನಲ್ಲಿ ಗಮನ ಸೆಳೆದರು.
ಹಿಮಾಚಲದ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಸಂರಕ್ಷಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
‘ನಮ್ಮ ಕಡೆ ಮನೆಗಳನ್ನು ಕತ್ ಕುನಿ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಇತ್ತೀಚೆಗೆ ಹಿಮಾಚಲದ ಸ್ಪಿತಿ, ಕಿನ್ನೌರ್ ಮತ್ತು ಭರ್ಮೌರ್ ಸಂಗೀತ ಸೇರಿದಂತೆ ಹಲವಾರು ಕಲಾ ಪ್ರಕಾರಗಳು ನಶಿಸಿ ಹೋಗುತ್ತಿವೆ‘ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕುರಿ ಮತ್ತು ಯಾಕ್ ಉಣ್ಣೆಯಿಂದ ತಯಾರಿಸಿದ ಜಾಕೆಟ್‌ಗಳು, ಟೋಪಿಗಳು ಮತ್ತು ಸ್ವೆಟರ್‌ಗಳಂತಹ ಸಾಂಪ್ರದಾಯಿಕ ಉಡುಪುಗಳಿಗೆ ವಿದೇಶದಲ್ಲೂ ಉತ್ತಮ ಬೆಲೆ ಇದೆ. ಹೀಗಾಗಿ ಹಿಮಾಚಲದ ಸಾಂಪ್ರದಾಯಿಕ ವೈಶಿಷ್ಯಗಳನ್ನು ರಕ್ಷಿಸುವುದು ಅಗತ್ಯವಿದೆ ಎಂದು ಕಂಗನಾ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.