ವಾರಣಾಸಿ: 11 ದಿನಗಳಹಿಂದೆ ಫಿರೋಜ್ ಖಾನ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರಮ್ ವಿಗ್ಯಾನ್ ( ಎಸ್‌ವಿಡಿವಿ)ಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇರಿದ್ದರು.ಸಂಸ್ಕೃತದಲ್ಲಿ ಡಾಕ್ಟರೇಟ್ ಪಡೆದವರಾಗಿದ್ದಾರೆ ಫಿರೋಜ್ ಖಾನ್. ಆದರೆ ಕೆಲವು ದಿನಗಳಿಂದ ಇವರು ಅಡಗಿಕೊಂಡಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಟ್ಟಿದ್ದಾರೆ.
ಸೋಮವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ 20ಎಸ್‌ವಿಡಿವಿ ವಿದ್ಯಾರ್ಥಿಗಳು ಹೋಮ ಕುಂಡವನ್ನು ಮಾಡಿ ಅದರ ಸುತ್ತ ಪ್ರತಿಭಟನೆಗೆ ಕುಳಿತಿದ್ದಾರೆ. ಖಾನ್ ಅವರು ನೇಮಕ ಮಾಡಿದ್ದಕ್ಕಾಗಿ ಈ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನವೆಂಬರ್ 7ರಂದು ಖಾನ್ ಇಲ್ಲಿ ನೇಮಕಗೊಂಡಿದ್ದು ಅಲ್ಲಿಂದ ಇಲ್ಲಿಯವರೆಗೆ ತರಗತಿಗಳು ನಡೆದಿಲ್ಲ. ತಮ್ಮ ಸಂಸ್ಕೃತ ಪ್ರೊಫೆಸರ್ ಮುಸ್ಲಿಂ ಎಂಬ ಕಾರಣದಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳವಿರೋಧದಿಂದ ಖಾನ್ ಅವರು ಗೊಂದಲದಲ್ಲಿದ್ದಾರೆ. ನನ್ನ ಜೀವನವಿಡೀ ಸಂಸ್ಕೃತ ಕಲಿತಿದ್ದೆ. ನಾನೊಬ್ಬ ಮುಸ್ಲಿಂ ಎಂದು ನನಗನಿಸಿರಲಿಲ್ಲ.ಆದರೆ ನಾನು ಈಗ ಕಲಿಸಲು ಆರಂಭಿಸಿದಾಗ ಅದು ಮಾತ್ರವೇ ವಿಷಯ ಆಗಿ ಬಿಟ್ಟಿತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಖಾನ್ ಹೇಳಿದ್ದಾರೆ.
ಶಾಸ್ತ್ರಿ (ಪದವಿ ಶಿಕ್ಷಣ), ಶಿಕ್ಷಾ ಶಾಸ್ತ್ರಿ (ಬಿಇಡಿ), ಆಚಾರ್ಯ (ಸ್ನಾತಕೋತ್ತರ) ಪಡೆದ ನಂತರ 2018ರಲ್ಲಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಖಾನ್ ಪಿಎಚ್‌ಡಿ ಪಡೆದಿದ್ದರು. ಎನ್ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಗಳಲ್ಲಿಯೂ ಇವರು ಪಾಸ್ ಆಗಿದ್ದಾರೆ.
ನಾನು ಎರಡನೇ ತರಗತಿಯಿಂದಲೇ ಸಂಸ್ಕೃತ ಕಲಿಕೆ ಆರಂಭಿಸಿದೆ. ಆದರೆ ಬಗರು ( ಜೈಪುರದಿಂದ 30 ಕಿಮಿ ದೂರದಲ್ಲಿರುವ ಪ್ರದೇಶ) ಮೊಹಲ್ಲಾದಲ್ಲಿ ಯಾರೊಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿಲ್ಲ. ಇಲ್ಲಿ ಶೇ. 30ರಷ್ಟು ಮುಸ್ಲಿಮರಿದ್ದಾರೆ. ನಮ್ಮ ಸ್ಥಳೀಯ ಮೌಲವಿ ಅಥವಾ ಸಮಾಜ ನನಗೆ ಏನೂ ಹೇಳಲಿಲ್ಲ. ನಿಜ ಹೇಳಬೇಕೆಂದರೆ ಕುರಾನ್‌ಗಿಂತಲೂ ಹೆಚ್ಚಾಗಿ ನನಗೆ ಸಂಸ್ಕೃತ ಸಾಹಿತ್ಯ ಗೊತ್ತು. ನನ್ನ ಸಂಸ್ಕೃತ ಪಾಂಡಿತ್ಯದ ಬಗ್ಗೆ ಅಲ್ಲಿರುವ ಹಿಂದೂಗಳೇ ಹೊಗಳಿದ್ದಾರೆ ಅಂತಾರೆ ಖಾನ್. ಖಾನ್ ಅವರ ಅಪ್ಪರಮ್ಜಾನ್ ಖಾನ್ ಕೂಡಾ ಸಂಸ್ಕೃತದಲ್ಲಿ ಪದವೀಧರರಾಗಿದ್ದಾರೆ.
ಎಸ್‌ವಿಡಿವಿ ಸಂಶೋಧನಾ ವಿದ್ಯಾರ್ಥಿ ಕೃಷ್ಣ ಕುಮಾರ್, ಶಶಿಕಾಂತ್ ಮಿಶ್ರಾ, ಶುಭಂ ತಿವಾರಿ ಮತ್ತು ಚಕ್ರಪಾಣಿ ಓಜಾ ಜತೆ ಪ್ರತಿಭಟನೆಯ ನಾಯಕತ್ವವನ್ನು ವಹಿಸಿದ್ದಾರೆ. ನಮ್ಮ ಭಾವನೆ ಮತ್ತು ಸಂಸ್ಕೃತಿಯನ್ನು ಅರಿಯದ ವ್ಯಕ್ತಿಯೊಬ್ಬರು ನಮ್ಮನ್ನು ಮತ್ತು ನಮ್ಮ ಧರ್ಮವನ್ನು ಹೇಗೆ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಕೃಷ್ಣ ಕುಮಾರ್ ಕೇಳುತ್ತಾರೆ.
ಈ ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯ ಸಂಘಟನೆಗಳು ಭಾಗಿಯಾಗಿಲ್ಲ ಎಂದು ಹೇಳಿದ ಓಜಾ, ಎಬಿವಿಪಿ ಸದಸ್ಯರಾಗಿದ್ದಾರೆ. ತಿವಾರಿ ಎಬಿವಿಪಿ ಮತ್ತು ಕೇಂದ್ರೀಯ ಬ್ರಾಹ್ಮಣ ಮಹಾಸಭಾದ ಸದಸ್ಯರಾಗಿದ್ದಾರೆ.
ಸಂಸ್ಕೃತ ಭಾಷಾ ಸಾಹಿತ್ಯವನ್ನು ಪಾಠ ಮಾಡುವುದಕ್ಕೂ,ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಬಿಎಚ್‌ಯು ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ.
ನಾನೊಬ್ಬ ಮುಸ್ಲಿಮನಾಗಿರುವಾಗ ಹಿಂದೂ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿ ಪಾಠ ಮಾಡಲು ಸಾಧ್ಯ ಎಂದು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಸಾಹಿತ್ಯ ವಿಭಾಗದಲ್ಲಿ ನಾನು ಸಂಸ್ಕೃತ ಸಾಹಿತ್ಯ, ಖ್ಯಾತ ನಾಟಕಗಳಾಗಿ ಅಭಿಜ್ಞಾನ ಶಾಕುಂತಲಂ, ಉತ್ತರ ರಾಮಚರಿತಂ ಅಥವಾ ಮಹಾಕಾವ್ಯಗಳಾದ ರಘುವಂಶ ಮಹಾಕಾವ್ಯ , ಹರಿಚರಿತಂ ಎಲ್ಲವನ್ನೂ ಕಲಿತಿದ್ದೇನೆ. ಇದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಖಾನ್ ಹೇಳುತ್ತಾರೆ.
ಬಿಎಚ್‌ಯುವಿನ ಕೆಲವು ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಖಾನ್ ಅವರಿಗೆಬೆಂಬಲ ಸೂಚಿಸಿದ್ದಾರೆ.
ಖಾನ್ ಅವರು ತುಂಬಾ ಒಳ್ಳೆ ಸ್ವಭಾವದ ವ್ಯಕ್ತಿ, ಮಿತ ಭಾಷಿ ಮತ್ತು ಜನರೊಂದಿಗೆ ಬೆರೆಯುವವರು ಎಂದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಪ್ರಿನ್ಸಿಪಾಲ್ ಮತ್ತು ಖಾನ್ ಅವರ ಅಧ್ಯಾಪಕರಾಗಿದ್ದ ಅರ್ಕನಾಥ್ ಚೌಧರಿ ಹೇಳಿದ್ದಾರೆ.
10 ದಿನಗಳಿಂದ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಯುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ ಖಾನ್, ನಾನು ವೇದ, ಧರ್ಮ ಶಾಸ್ತ್ರ ಅಥವಾ ಜ್ಯೋತಿಷ್ಯವನ್ನು ಕಲಿಸುತ್ತಿದ್ದರೆ ವಿದ್ಯಾರ್ಥಿಗಳ ವಾದವನ್ನು ಒಪ್ಪುತ್ತಿದೆ. ಆದರೆ ಸಂಸ್ಕೃತ ಸಾಹಿತ್ಯ ಕಲಿಸುವುದಕ್ಕೆ ಧರ್ಮ ಯಾಕೆ? ಅಲ್ಲಿ ಏನು ಬರೆದಿದೆಯೋ ಅದನ್ನೇ ನಾನು ಕಲಿಸುವುದು.ನನ್ನನ್ನು ಬಿಎಚ್‌ಯು ನೇಮಕ ಮಾಡಿದೆ ಎಂದಾಗ ಅನುಭವಿಸಿದ ಖುಷಿ ಈಗ ಇಲ್ಲದಾಗಿದೆ. ಇಷ್ಟೆಲ್ಲ ಆದ ಮೇಲೂ ನೀವು ಅಲ್ಲಿ ಕಲಿಸಲು ಒಪ್ಪುತ್ತೀರಾ ಎಂದು ಕೇಳಿದಾಗ ವಿದ್ಯಾರ್ಥಿಗಳ ಮನಸ್ಸು ಬದಲಾಗಬಹುದು ಎಂದು ಖಾನ್ ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.