ನವದೆಹಲಿ: ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಕುರಿತು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನೀಡಿದ ಹೇಳಿಕೆಯಿಂದ ಉಂಟಾಗಿರುವ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಪ್ರಜ್ಞಾ ಹೇಳಿಕೆಯನ್ನು ಖಂಡಿಸಿದ್ದು, ಪಕ್ಷದ ಮಹತ್ವದ ಸಭೆಯಿಂದ ಅವರನ್ನು ಹೊರಗಿಡಲು ಗುರುವಾರ ನಿರ್ಧರಿಸಿದೆ.
2008ರ ಮಾಲೇಂಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ರಕ್ಷಣಾ ಸಚಿವಾಲಯದ ಸಮಾಲೋಚನಾ ಸಮಿತಿಯಿಂದ ಕೊಕ್ ನೀಡಲು ನಿರ್ಧರಿಸಲಾಗಿದೆ. ಜತೆಗೆ ಈ ಅಧಿವೇಶನದ ಅವಧಿಯಲ್ಲಿ ನಡೆಯುವ ಪಕ್ಷದ ಸಂಸದೀಯ ಸಮಿತಿ ಸಭೆಗೆ ಹಾಜರಾಗುವುದಕ್ಕೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.
ಸಾಧ್ವಿ ಹೇಳಿಕೆಯನ್ನು ಒಪ್ಪಲಾಗದು ಎಂದುಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ ಪ್ರಜ್ಞಾ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದ ಸಚಿವ ರಾಜನಾಥ್ ಸಿಂಗ್ ನಡೆ ಖಂಡಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಗುರುವಾರ ಸಭಾತ್ಯಾಗ ಮಾಡಿದವು.
ಖಂಡನಾ ನಿರ್ಣಯ:ಪ್ರಜ್ಞಾ ವಿರುದ್ಧ ಲೋಕಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಗುರುವಾರ ನಿರ್ಧರಿಸಿವೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುವ ಖಂಡನಾ ನಿರ್ಣಯಕ್ಕೆ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ರಾಷ್ಟ್ರಪಿತನನ್ನು ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ಅಪಮಾನ ಮಾಡಿರುವ ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸದನ ಖಂಡಿಸುತ್ತದೆ. ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇವೆ’ ಎಂಬುದಾಗಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ಪಕ್ಷವನ್ನು ‘ಭಯೋತ್ಪಾದಕ ಪಕ್ಷ’ ಎಂದು ಕರೆದಿರುವ ಪ್ರಜ್ಞಾ, ಇದಕ್ಕೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.
ದೇಶದ್ರೋಹ ಪ್ರಕರಣ: ಇಂದೋರ್‌ನ ಕಾಂಗ್ರೆಸ್ ಕಾರ್ಯಕರ್ತರು ಪ್ರಜ್ಞಾ ವಿರುದ್ಧ
ದೇಶದ್ರೋಹ ದೂರು ದಾಖಲಿಸಿದ್ದಾರೆ. ದೂರನ್ನು ಪರಿಶೀಲಿಸಲಾಗುತ್ತಿದ್ದು, ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ಗೋಡ್ಸೆ ಭಯೋತ್ಪಾದಕ ಅಲ್ಲ’
ಬಲಿಯಾ (ಉತ್ತರ ಪ್ರದೇಶ): ‘ಗೋಡ್ಸೆ ಮಾಡಿದ್ದು ತಪ್ಪು, ಆದರೆ, ಆತ ಭಯೋತ್ಪಾದಕ ಅಲ್ಲ. ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜನರು ಭಯೋತ್ಪಾದಕರು’ ಎಂದು ಬಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಜ್ಞಾ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನಿಸುತ್ತಿರುವ ಮಧ್ಯೆಯೇ ಸುರೇಂದ್ರ ಸಿಂಗ್ ಈ ಮಾತು ಹೇಳಿದ್ದಾರೆ. ಗೋಡ್ಸೆ ದೇಶಭಕ್ತನೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಸುರೇಂದ್ರ ಸಿಂಗ್ ಅವರು ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು.
ರಾಜಸ್ಥಾನ ವಿಧಾನಸಭೆಯಲ್ಲಿ ‘ಗೋಳ್ವಲಕರ್’ ಗದ್ದಲ
ಜೈಪುರ ವರದಿ: ಆರ್‌ಎಸ್‌ಎಸ್ ಸಿದ್ಧಾಂತವಾದಿ ಎಂ.ಎಸ್. ಗೋಳ್ವಲಕರ್ ಅವರ ಕುರಿತ ಹೇಳಿಕೆಯು ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
‘ಗೋಳ್ವಲಕರ್ ಅವರ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕಮ್ಯುನಿಸ್ಟರನ್ನು ‘ಮೂರು ಬೆದರಿಕೆಗಳು’ ಎಂಬುದಾಗಿ ಪಟ್ಟಿಮಾಡಲಾಗಿದೆ’ ಎಂದು ಸಚಿವ ಶಾಂತಿ ಧರಿವಾಲಾ ಅವರು ಹೇಳಿದರು. ಇದರಿಂದ ಕೆರಳಿದ ಬಿಜೆಪಿ ಶಾಸಕರಾದ ವಾಸುದೇವ ದೇವನಾನಿ, ಮದನ್ ದಿಲಾವಾರ್ ಮೊದಲಾದವರು ಸದನದಲ್ಲಿ ಕೋಲಾಹಲ ಎಬ್ಬಿಸಿದರು.
ಮಧ್ಯಪ್ರವೇಶಿಸಿದ ಸ್ಪೀಕರ್ ಸಿ.ಪಿ. ಜೋಷಿ, ‘ಸಚಿವರು ಪುಸ್ತಕವನ್ನು ಉಲ್ಲೇಖಿಸಿದರೆ ತಪ್ಪೇನಿಲ್ಲ’ ಎಂದರು. ಭವಿಷ್ಯದ ಸವಾಲುಗಳ ಬಗ್ಗೆ ಮಾತನಾಡುವಂತೆ ಅವರು ಸಲಹೆ ನೀಡಿದರು.
ರಾಷ್ಟ್ರಪಿತ ಗಾಂಧೀಜಿ ಹಂತಕನನ್ನು ದೇಶಭಕ್ತ ಎಂದು ಕರೆಯುವುದನ್ನು ಪಕ್ಷ ಎಂದಿಗೂ ಒಪ್ಪುವುದಿಲ್ಲ, ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ
-ರಾಜನಾಥ್ ಸಿಂಗ್,ರಕ್ಷಣಾ ಸಚಿವ
ಸಂಸದ ರಾಜಾ ಅವರು ಉಧಾಮ್ ಸಿಂಗ್ ಹೆಸರು ಪ್ರಸ್ತಾಪಿಸಿದಾಗ ನಾನು ಮಧ್ಯಪ್ರವೇಶಿಸಿ ‘ದೇಶಭಕ್ತ’ ಎಂದು ಕರೆದೆ. ಅದು ಗೋಡ್ಸೆಗೆ ಹೇಳಿದ್ದಲ್ಲ
-ಪ್ರಜ್ಞಾ ಸಿಂಗ್, ಬಿಜೆಪಿ ಸಂಸದೆ
ಭಯೋತ್ಪಾದಕಿ ಪ್ರಜ್ಞಾ ಅವರು ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಇದು ಸಂಸತ್ತಿನ ಇತಿಹಾಸದಲ್ಲಿ ಕೆಟ್ಟದಿನ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.