ಚಂಡೀಗಡ: ಚಂಡೀಗಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ.
ವಿದ್ಯಾರ್ಥಿನಿಯೊಬ್ಬಳು ತನ್ನ ಖಾಸಗಿ ವಿಡಿಯೊಗಳನ್ನು ತನ್ನ ಪ್ರಿಯಕರನಿಗೆ ಹರಿಬಿಟ್ಟಿದ್ದಳು. ಈ ವಿಡಿಯೊ ಒಂದು ಮಾತ್ರ ಸೋರಿಕೆ ಆಗಿದೆ. ಆದರೆ, 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೊಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ಘಟನೆಗೆ ಬಂಧಿತ ಯುವತಿಯ ಒಂದು ವಿಡಿಯೊ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಬೇರೆ ಯಾವುದೇ ಯುವತಿಗೆ ಸಂಬಂಧಿಸಿದ ವಿಡಿಯೊ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ದೊರಕಿಲ್ಲ. ವಿದ್ಯಾರ್ಥಿನಿಯರು ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಮೋಹಾಲಿ ಎಸ್‌ಪಿ ವಿವೇಕ್ ಸೋನಿ ತಿಳಿಸಿದ್ದಾರೆ.
‘ಬಂಧಿತ ಯುವತಿ ತನ್ನ ಪ್ರಿಯಕರನಿಗೆ ಕಳಿಸಲುಬಾತ್‌ರೂಮ್‌ನಲ್ಲಿ ತನ್ನ ಖಾಸಗಿ ವಿಡಿಯೊವನ್ನು ಶೂಟ್ ಮಾಡುವಾಗ ಅದನ್ನು ಇತರ ಕೆಲ ವಿದ್ಯಾರ್ಥಿನಿಯರು ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತ ಯುವತಿಯೇ ದ್ವೇಷದಿಂದ ಈ ರೀತಿ ವಿಡಿಯೊಗಳನ್ನು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ವೈರಲ್ ಮಾಡಿರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶಿಸಿದ್ದಾರೆ.
ಘಟನೆ ಖಂಡಿಸಿ ಟ್ವೀಟ್ ಮಾಡಿರುವ ಅವರು, ‘ಚಂಡೀಗಡ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಕೇಳಿ ಬೇಸರವಾಗಿದೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ವದಂತಿಗಳಿಗೆ ಕಿವಿ ಕೊಡದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಇದು ಉನ್ನತ ಮಟ್ಟದ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
ಪ್ರಕರಣವನ್ನು ಖಂಡಿಸಿ ಪಂಜಾಬ್‌ನ ಮೊಹಾಲಿಯಲ್ಲಿ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.