ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಇಬ್ಬರು ಸಚಿವರು ಹಾಗೂ ಮೂವರು ಶಾಸಕರ ಮನೆ ಮೇಲೆ ಪ್ರತಿಭಟನಾಕಾರರು ಶನಿವಾರ ಮುತ್ತಿಗೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕಿರಣ್ ಕುಮಾರ್ ಅವರು ಇಂದು (ಶನಿವಾರ) ಸಂಜೆ ಆದೇಶ ಹೊರಡಿಸಿದ್ದಾರೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಸಂಪಮ್ ರಂಜನ್ ಹಾಗು ಆಹಾರ ಸಚಿವ ಎಲ್. ಸುಸಿಂದ್ರೋ ಸಿಂಗ್ ಅವರ ಮನೆ ಮೇಲೆ ಪ್ರತಿಭಟನೆಯಲ್ಲಿ ನಿರತರಾದ ಉದ್ರಿಕ್ತ ಗುಂಪು ದಾಳಿ ನಡೆಸಿತು.
ಮೂವರ ಕೊಲೆಗೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಒಂದೊಮ್ಮೆ ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾದರೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಭರವಸೆಯನ್ನು ಸಂಪಮ್ ರಂಜನ್ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಅಳಿಯನೂ ಆಗಿರುವ ಬಿಜೆಪಿ ಶಾಸಕ ಆರ್‌ಕೆ ಇಮೊ ಅವರ ಮನೆ ಮೇಲೂ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಕೃತ್ಯ ಎಸಗಿದವರನ್ನು 24 ಗಂಟೆಯೊಳಗಾಗಿ ಬಂಧಿಸುವಂತೆ ಗಡುವು ನೀಡಿದೆ. ಇವರೊಂದಿಗೆ ಸಪಂ ನಿಶಿಕಾಂತ್ ಸಿಂಗ್ ಮನೆಗೂ ಮುತ್ತಿಗೆ ಹಾಕಲಾಗಿದೆ.
ಜಿರಿಬಾಮ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಆರು ಜನರ ಪೈಕಿ ಮೂವರ ಶವ ಪತ್ತೆಯಾಗಿದೆ. ಮಣಿಪುರ ಹಾಗೂ ಅಸ್ಸಾಂ ಗಡಿಯಲ್ಲಿರುವ ನದಿ ಬಳಿ ಶುಕ್ರವಾರ ರಾತ್ರಿ ಶವಗಳು ಪತ್ತೆಯಾಗಿದ್ದವು. ಮೃತರು ಮಹಿಳೆ ಹಾಗೂ ಇಬ್ಬರು ಮಕ್ಕಳು ಎಂದೆನ್ನಲಾಗಿದೆ. ಆದರೆ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.