ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರತಿಭಟನಾ ನಿರತ ರೈತರ ಒಂದು ಗುಂಪು ಮಂಗಳವಾರ ‘ಟ್ರ್ಯಾಕ್ಟರ್ ರ‍್ಯಾಲಿ‘ಗೆ ಪೊಲೀಸರು ನಿಗದಿಪಡಿಸಿದ್ದ ಮಾರ್ಗವನ್ನು ಬದಲಿಸಿ, ಟ್ರ್ಯಾಕ್ಟರ್‌ಗಳೊಂದಿಗೆ ಕೆಂಪು ಕೋಟೆ ಅವರಣವನ್ನು ಪ್ರವೇಶಿಸಿದರು.
ಆ ಗುಂಪಿನಲ್ಲಿದ್ದ ಕೆಲವು ರೈತರು ಮತ್ತು ಸಾಂಪ್ರದಾಯಿಕ ಸಿಖ್ ಹೋರಾಟಗಾರರು, ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವದ ವೇಳೆ ಪ್ರಧಾನಿಯವರು ಭಾರತದ ತ್ರಿವರ್ಣ ಧ್ವಜ ಹಾರಿಸುವ ಪಕ್ಕದ ಗೋಪುರದಲ್ಲಿಅನ್ಯ ಧ್ವಜವನ್ನು ಹಾರಿಸಿದರು. ಈ ವೇಳೆ ಕೆಂಪು ಕೋಟೆಯ ಆವರಣದಲ್ಲಿ ಜನಸಂದಣಿ ಹೆಚ್ಚಾಗಿತ್ತು.
ರಾಜ್‌ಪತ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆ ನಂತರ, ನಿಗದಿತ ದಾರಿಯಲ್ಲೇ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಪೊಲೀಸರು ರೈತ ಸಂಘಟನೆಗಳಿಗೆ ಅನುಮತಿ ನೀಡಿದ್ದರು.
ಇದನ್ನೂ ಓದಿ:ರೈತರ ಟ್ರ್ಯಾಕ್ಟರ್ ಪರೇಡ್ LIVE Updates: ಕೆಂಪು ಕೋಟೆಯ ಮೇಲೆ ಅನ್ಯ ಧ್ವಜ ಹಾರಿಸಿದ ಪ್ರತಿಭಟನಾಕಾರರು Live
ಆದರೆ, ಒಂದು ಗುಂಪಿನ ರೈತರು ನಿಗದಿಪಡಿಸಿದ ದಾರಿಯನ್ನು ಬಿಟ್ಟು, ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡಿದ್ದ ಸಮಯಕ್ಕಿಂತ ಮುಂಚೆಯೇ, ಮಧ್ಯ ದೆಹಲಿಯತ್ತ ನುಗ್ಗಿದರು. ಗಣರಾಜ್ಯೋತ್ಸವ ನಡೆಯುವ ವೇಳೆಯಲ್ಲೇ ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿ ಪ್ರವೇಶಿಸಿದರು. ಪೊಲೀಸರು ನಿಗದಿಪಡಿಸಿದ ದಾರಿಯನ್ನು ಬಿಟ್ಟು ಬೇರೆ ಮಾರ್ಗ ದಲ್ಲಿ ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ದೆಹಲಿಯ ಕೆಲವೆಡೆ ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್, ಕಂಟೇನರ್ ಅಡ್ಡ ಇಟ್ಟರು. ಅವೆಲ್ಲವನ್ನು ಧ್ವಂಸ ಮಾಡಿದ ರೈತರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಪರಿಸ್ಥಿತಿ ಕೈ ಮೀರುವುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಅಶ್ರವಾಯು ಪ್ರಯೋಗಿಸಿದರು.
ಇದನ್ನೂ ಓದಿ:‘ರಾಜರುಮಾಲು’ ಧರಿಸಿದ ಪ್ರಧಾನಿ ನರೇಂದ್ರ ಮೋದಿ
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.