ADVERTISEMENT

ಪಿಕ್ಸೆಲ್‌ನ ‘ಆನಂದ್‌’ ಉಪಗ್ರಹ 26ರಂದು ನಭಕ್ಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 14:30 IST
Last Updated 21 ನವೆಂಬರ್ 2022, 14:30 IST
ಪಿಕ್ಸೆಲ್‌ ಕಂಪನಿಯ ‘ಆನಂದ್’ ಉಪಗ್ರಹ –ಟ್ವಿಟರ್‌ ಚಿತ್ರ
ಪಿಕ್ಸೆಲ್‌ ಕಂಪನಿಯ ‘ಆನಂದ್’ ಉಪಗ್ರಹ –ಟ್ವಿಟರ್‌ ಚಿತ್ರ   

ನವದೆಹಲಿ: ಬಾಹ್ಯಾಕಾಶ ತಂತ್ರಜ್ಞಾನದ ನವೋದ್ಯಮ ಪಿಕ್ಸೆಲ್‌ ತನ್ನ ಮೂರನೇ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್‌‘ಆನಂದ್‌’ ಹೆಸರಿನ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ (ನ.26) ಉಡಾವಣೆ ಮಾಡಲು ಸನ್ನದ್ಧವಾಗಿದೆ.

ಆನಂದ್‌ ಉಪಗ್ರಹವು 15 ಕೆ.ಜಿಗಿಂತಲೂ ಕಡಿಮೆ ತೂಕವಿರುವ ಹೈಪರ್ ಸ್ಪೆಕ್ಟ್ರಲ್ ಮೈಕ್ರೊ ಸ್ಯಾಟಲೈಟ್ ಆಗಿದೆ. ಆದರೆ, 150ಕ್ಕೂ ಹೆಚ್ಚು ತರಂಗಾಂತರಗಳನ್ನು ಹೊಂದಿದೆ. ‌ಸದ್ಯ ಕಾರ್ಯಾಚರಣೆಯಲ್ಲಿರುವ 10ಕ್ಕಿಂತ ಹೆಚ್ಚು ತರಂಗಾಂತರಗಳಿಲ್ಲದ ಹೈಪರ್ ಸ್ಪೆಕ್ಟ್ರಲ್ ರಹಿತ ಉಪಗ್ರಹಗಳಿಗಿಂತಲೂ ಭೂಮಿಯ ಚಿತ್ರಗಳನ್ನು ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿ ಸೆರೆಹಿಡಿಯಲು ‘ಆನಂದ್‌’ ಉಪಗ್ರಹ ನೆರವಾಗಲಿದೆ.

ಕೀಟಗಳ ದಾಳಿ, ಕಾಳ್ಗಿಚ್ಚಿನ ನಕ್ಷೆ,ಮಣ್ಣಿನ ಒತ್ತಡ ಮತ್ತು ತೈಲ ಚೂರುಗಳು ಸೇರಿ ಇತರ ವಸ್ತುಗಳನ್ನು ಗುರುತಿಸಲು ಈ ಉಪಗ್ರಹ ಒದಗಿಸುವ ಚಿತ್ರಗಳು ನೆರವಾಗಲಿವೆ ಎಂದು ಪಿಕ್ಸೆಲ್ ಸೋಮವಾರ ತಿಳಿಸಿದೆ.

ADVERTISEMENT

ಕಕ್ಷೆಯಲ್ಲಿರುವ ಇತರ ಉಪಗ್ರಹಗಳಿಗೆ ಹೋಲಿಸಿದರೆ ‘ಆನಂದ್’ ಉಪಗ್ರಹವು 50 ಪಟ್ಟುವರೆಗೂ, ಅಸಾಧಾರಣ ಮಾಹಿತಿಗಳನ್ನು ಒದಗಿಸುವಂತಹ ಉಪಕರಣಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ಹೇಳಿದೆ.

‘ಉಪಗ್ರಹವನ್ನು ಹಲವಾರು ಬಾರಿ ಮರುಪರೀಕ್ಷೆಗೆ ಒಳಪಡಿಸಿದ್ದು, ಉಡಾವಣೆ 18 ತಿಂಗಳಿಗೂ ಹೆಚ್ಚು ವಿಳಂಬವಾಗಿದೆ. ತಂಡದ ಎರಡು ವರ್ಷಗಳಿಗೂ ಅಧಿಕ ಸಮಯದ ಕಠಿಣ ಪರಿಶ್ರಮ ಮತ್ತು ಬೆವರಿನ ಫಲವಾಗಿ ಇದೇ ವಾರ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ’ ಎಂದು ಪಿಕ್ಸೆಲ್‌ನ ಸ್ಥಾಪಕ ಮತ್ತು ಸಿಇಒಎಂದು ಅವೈಸ್ ಅಹ್ಮದ್‌ ಟ್ವಿಟರ್‌ನಲ್ಲಿ ಹೇಳಿದರು.

ಅವೈಸ್‌ಅಹ್ಮದ್ ಮತ್ತು ಕ್ಲಿತಿಜ್ ಖಾಂಡೆಲ್‌ವಾಲ್‌ ಸ್ಥಾಪಿಸಿದ ಪಿಕ್ಸೆಲ್‌ ಕಳೆದ ಏಪ್ರಿಲ್‌ನಲ್ಲಿ ಇಲಾನ್‌ ಮಸ್ಕ್ ಅವರ ಸ್ಪೇಸ್ ಎಕ್ಸ್‌ನ ಫಾಲ್ಕನ್ -9 ರಾಕೆಟ್ ಮೂಲಕ ವಾಣಿಜ್ಯ ಉಪಗ್ರಹ ‘ಶಾಕುಂತಲಾ’ ಉಡಾವಣೆ ಮಾಡಿದ ಮೊದಲ ಭಾರತೀಯ ಕಂಪನಿ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.