ADVERTISEMENT

ದೇಶದ ಭವಿಷ್ಯಕ್ಕಾಗಿ ಸಾರ್ವಜನಿಕ ಚಳವಳಿ ಅಗತ್ಯ: ಅಣ್ಣಾ ಹಜಾರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 15:04 IST
Last Updated 19 ಫೆಬ್ರುವರಿ 2023, 15:04 IST
ಅಣ್ಣಾ ಹಜಾರೆ
ಅಣ್ಣಾ ಹಜಾರೆ   

ಮುಂಬೈ: ‘ಭವಿಷ್ಯದ ಭಾರತಕ್ಕಾಗಿ ಸಾರ್ವಜನಿಕ ಚಳವಳಿ ಅತ್ಯಗತ್ಯ’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಅಹಮದ್‌ನಗರ ಜಿಲ್ಲೆಯ ರಾಳೆಗಾಂವ್ ಸಿದ್ಧಿ ಗ್ರಾಮದಲ್ಲಿ ಭಾನುವಾರ ತಮ್ಮ ಆತ್ಮಚರಿತ್ರೆ ‘ಜನನಾಯಕ ಅಣ್ಣಾ ಹಜಾರೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಚಳವಳಿಯಿಂದ ಸ್ವಾತಂತ್ರ್ಯವನ್ನು ಪಡೆಯುವ ಮೂಲಕ ಮಹಾತ್ಮ ಗಾಂಧಿ ಅವರು ಹಾಕಿಕೊಟ್ಟ ಮಾರ್ಗವನ್ನು ನಾವು ಮರೆಯಬಾರದು. ಭವಿಷ್ಯದ ಭಾರತಕ್ಕಾಗಿ ಸಾರ್ವಜನಿಕ ಚಳವಳಿಗಳು ಅಗತ್ಯ’ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ರಮೇಶ್ ನಿರ್ಮಲ್, ಭುವನೇಂದ್ರ ತ್ಯಾಗಿ ಹಾಗೂ ಸುತ್ಲುಜ್‌ ಪ್ರಕಾಶನದ ದೇಶ್ ನಿರ್ಮೋಹಿ ಅವರು ಅಣ್ಣಾ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಸುದೀರ್ಘ ಸಂವಾದ ನಡೆಸಿದರು.‌

ADVERTISEMENT

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಚಳವಳಿಗಳು ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಣ್ಣಾ ಹಜಾರೆ ಅವರು, ‘ಸಾಮಾನ್ಯ ಜನರು ತಮ್ಮ ಹಿತಾಸಕ್ತಿಗಳತ್ತ ಮಾತ್ರ ಆಸಕ್ತರಾಗಿದ್ದಾರೆ. ನಾಯಕತ್ವ ವಹಿಸಿಕೊಳ್ಳಲು ಕೂಡಾ ಯಾರೂ ಮುಂದೆ ಬರುತ್ತಿಲ್ಲ. ಅಗತ್ಯಬಿದ್ದರೆ ಸ್ವಯಂಪ್ರೇರಿತ ಚಳವಳಿ ರೂಪಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಹಕ್ಕುಗಳ ಮಹತ್ವವನ್ನು ವಿವರಿಸಬೇಕು. ಹಕ್ಕುಗಳನ್ನು ಪಡೆಯಲು ಧ್ವನಿ ಎತ್ತುವುದನ್ನು ಮುಂದುವರಿಸುವುದನ್ನು ಸಹ ಕಲಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಚಳವಳಿಗಳ ಮೂಲಕವೇ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸಾಧ್ಯ. ಮಹಾರಾಷ್ಟ್ರದಲ್ಲಿ ಪ್ರತಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದ್ದೇವೆ. ಈ ಮೂಲಕ ನಾವು ಬಲವಾದ ಕಾನೂನುಗಳನ್ನು ಪಡೆದುಕೊಂಡಿದ್ದೇವೆ. ಆರ್‌ಟಿಐ ಕಾಯ್ದೆಯಂತಹ ಕಾನೂನು ನಮ್ಮಲ್ಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.