ಪುದುಚೆರಿ: ದೇವಸ್ಥಾನದ ಆವರಣದಲ್ಲಿ ಕೂತಿದ್ದ ಭಿಕ್ಷುಕರನ್ನು ಕಾಲಿ ಮಾಡಿಸುವ ವೇಳೆ ಭಿಕ್ಷುಕಿಯೊಬ್ಬರ ಬಳಿಯಲ್ಲಿ ₹12 ಸಾವಿರ ನಗದು ಲಭ್ಯವಾಗಿದ್ದು, ಇದಲ್ಲದೆ ಬ್ಯಾಂಕ್ ಖಾತೆಯಲ್ಲಿ ₹2 ಲಕ್ಷ ಇರುವುದು ಪತ್ತೆಯಾಗಿದೆ.
ಈ ವಿಚಾರವನ್ನು ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಆಕೆಯ ಬಳಿಯಲ್ಲಿ ₹ 12 ಸಾವಿರ ನಗದು, ಬ್ಯಾಗಿನಲ್ಲಿದ್ದ ಪಾಸ್ ಪುಸ್ತಕದಲ್ಲಿ 2 ಲಕ್ಷ ರೂಪಾಯಿ ಜಮೆಯಾಗಿರುವುದು ಮತ್ತು ಆಧಾರ್ ಕಾರ್ಡ್ ಪತ್ತೆಯಾಗಿದೆ.
ಭಿಕ್ಷುಕಿಯನ್ನು 70 ವರ್ಷದ ಪಾರ್ವತಮ್ಮ ಎಂದು ಗುರುತಿಸಲಾಗಿದ್ದು, ದೇವಸ್ಥಾನಕಕ್ಕೆ ಭೇಟಿ ನೀಡುವ ಭಕ್ತರ ಬಳಿ ಭಿಕ್ಷೆ ಬೇಡಿ ಹಣವನ್ನು ಸಂಪಾದಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ದೇಗುಲದ ಹೊರಭಾಗದಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಎಸ್‌ಪಿ ಮಾರನ್ ಮಾತನಾಡಿ, ಆಕೆಯು ₹ 2 ಲಕ್ಷ ಹಣ ಜಮೆಯಾಗಿರುವ ಬ್ಯಾಂಕ್ ಖಾತೆ ಹೊಂದಿದ್ದು, ಸುಮಾರು ₹ 12 ಸಾವಿರ ನಗದು ಇದೆ. ಮಹಿಳೆಯು ತಮಿಳುನಾಡಿನ ಕಲ್ಲಿಕುರಿಚಿಯವರಾಗಿದ್ದು, ಸಂಬಂಧಿಕರಿಗೆ ಆಕೆಯನ್ನು ಒಪ್ಪಿಸಲಾಗಿದೆ. ಆಕೆಯ ಪತಿಯು 40 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅದಾದ ಬಳಿಕ ಆಕೆ ಪುದುಚೆರಿಯ ಬೀದಿಗಳಲ್ಲಿ ಅಲೆಯುತ್ತಿದ್ದರು ಎಂದು ತಿಳಿಸಿದ್ದಾರೆ.
ಪಾರ್ವತಮ್ಮ 8 ವರ್ಷಗಳಿಂದಲೂ ದೇಗುಲದಲ್ಲೇ ವಾಸಿಸುತ್ತಿದ್ದರು ಮತ್ತು ದೇಗುಲಕ್ಕೆ ಬರುವವರು ನೀಡುತ್ತಿದ್ದ ಆಹಾರ ಸೇವಿಸಿ ಬದುಕಿದ್ದರು. ಆಕೆಯ ಬಳಿಯಿದ್ದ ಹಣದ ಬಗ್ಗೆ ತಿಳಿಯಲಷ್ಟೇ ನಾವು ಇಲ್ಲಿಗೆ ಬಂದೆವು ಎನ್ನುತ್ತಾರೆ ಅಲ್ಲಿನ ವ್ಯಾಪಾರಿಯೊಬ್ಬರು.
ಸದ್ಯ ಪಾರ್ವತಮ್ಮ ಅವರನ್ನು ಕಲ್ಲಕುರಿಚಿ ಗ್ರಾಮದ ಸಂಬಂಧಿಕರಿಗೆ ಒಪ್ಪಿಸಲಾಗಿದೆ ಮತ್ತು ಆಕೆಯ ಸೋದರನ ಆರೈಕೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.