ಪುದುಚೇರಿ: ‘ಸರ್ಕಾರದಪ್ರಸ್ತಾವಗಳಿಗೆ ಒಪ್ಪಿಗೆ ಸೂಚಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಅವರ ನಿವಾಸದ ಮುಂದೆನಡೆಸುತ್ತಿರುವ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ತಮ್ಮ ತಮ್ಮ ಕಚೇರಿಗಳಿಂದ ಹೊರಟ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯಪಾಲರ ಗೃಹ ಕಚೇರಿ ರಾಜ್ ನಿವಾಸದ ಬಳಿ ಬುಧವಾರ ಮಧ್ಯಾಹ್ನವೇ ಬಂದ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಕಪ್ಪು ಅಂಗಿ ಧರಿಸಿ ಧರಣಿ ನಡೆಸಿದರು. ಕಾಂಗ್ರೆಸ್‌ನ ವಿವಿಧ ಘಟಕದ ಮುಖಂಡರು ಹಾಗೂ ಡಿಎಂಕೆಯ ಕಾರ್ಯಕರ್ತರು ಪ್ರತಿಭಟನೆಗೆ ಕೈ ಜೋಡಿಸಿದರು. ಸಂಪುಟ ಸದಸ್ಯರ ಜೊತೆಗೆ ರಾತ್ರಿಯಿಡೀ ಅಲ್ಲೇ ಮಲಗಿ ಧರಣಿ ನಡೆಸಿದರು.
‘ರಾಜ್ಯದ ಜನರಿಗೆ ಉಚಿತವಾಗಿ ಅಕ್ಕಿ ಪೂರೈಸುವ ಯೋಜನೆ ಸೇರಿದಂತೆ 39 ಪ್ರಸ್ತಾವಗಳಿಗೆ ಸಹಿಹಾಕಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂಬುದು ಮುಖ್ಯಮಂತ್ರಿ ನಾರಾಯಣಸ್ವಾಮಿ ಆರೋಪಿಸಿದರು.
ಕ್ಷಿಪ್ರ ಕಾರ್ಯಾಚರಣಾ ಪಡೆ (ಆರ್‌ಎಎಫ್) ಬಿಗಿ ಭದ್ರತೆಯ ನಡುವೆ ಕಿರಣ್‌ಬೇಡಿ ಗುರುವಾರ ಬೆಳಿಗ್ಗೆ ನವದೆಹಲಿಗೆ ತೆರಳಿದರು. ರಾಜಭವನದ ಮೂಲಗಳ ಪ್ರಕಾರ, ಫೆಬ್ರುವರಿ 20ರಂದು ಮತ್ತೆ ಪುದುಚೇರಿಗೆ ಹಿಂತಿರುಗಲಿದ್ದಾರೆ. ಸರ್ಕಾರ ಕಳುಹಿಸಿರುವಪ್ರಸ್ತಾವಗಳ ಬಗ್ಗೆ ಫೆ.21ರಂದ ಚರ್ಚೆ ನಡೆಸಲು ಬರುವಂತೆ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಿದ್ದಾರೆ.
ಅಸಮಾಧಾನ: ‘ಜನರಿಗೆ ಸಂಬಂಧಿಸಿದ ಬೇಡಿಕೆ ಈಡೇರಿಸುವಂತೆ ಜನಪ್ರತಿನಿಧಿಗಳು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಲೆಫ್ಟಿನೆಂಟ್ ಗವರ್ನರ್ ಬೇಡಿ ಅವರು ಚೆನ್ನೈ ಮೂಲಕ ದೆಹಲಿಗೆ ತೆರಳಿದ್ದಾರೆ. ಜನಪ್ರಿಯ ಸರ್ಕಾರವನ್ನು ಅವರು ಸಹಿಸುವುದಿಲ್ಲ ಎಂದು ಇದರಿಂದಲೇ ತಿಳಿಯಬಹುದು’ ಎಂದು ಲೋಕೋಪಯೋಗಿ ಸಚಿವ ಎ.ನಮಾಶ್ಸಿವಯಾಮ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.