ಚೆನ್ನೈ: ಪುದುಚೇರಿ ಬಿಜೆಪಿ ಘಟಕವು ಮತದಾರರ ಆಧಾರ್ ವಿವರಗಳನ್ನು ಪಡೆದುಕೊಂಡಿದೆ ಎಂಬ ಆರೋಪದ ಬಗ್ಗೆ ಗಂಭೀರವಾದ ತನಿಖೆ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ಪುದುಚೇರಿ ವಿಧಾನಸಭೆಯ ಚುನಾವಣೆ ಮುಂದೂಡಲು ಸಾಧ್ಯವೇ ಎಂದು ಚುನಾವಣಾ ಆಯೋಗವನ್ನು ಕೇಳಿದೆ. ಪುದುಚೇರಿಯಲ್ಲಿ ಏಪ್ರಿಲ್ 6ಕ್ಕೆ ಮತದಾನ ನಿಗದಿಯಾಗಿದೆ.
ಕೇವಲ ಆರೋಪಗಳ ಆಧಾರದಲ್ಲಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ, ಆದರೆ, ಬಿಜೆಪಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಆಯೋಗವು ಕೋರ್ಟ್‌ಗೆ ತಿಳಿಸಿದೆ.
ಡಿವೈಎಫ್‌ಐ ಪುದುಚೇರಿ ಘಟಕದ ಅಧ್ಯಕ್ಷ ಎ. ಆನಂದ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ನೇತೃತ್ವದ ಪೀಠವು ನಡೆಸಿತು. ಪುದುಚೇರಿ ಬಿಜೆಪಿ ಘಟಕವು ಮತದಾರರ ಆಧಾರ್ ವಿವರಗಳನ್ನು ಅಕ್ರಮವಾಗಿ ಪಡೆದಿದೆ. ಅದರ ಆಧಾರದಲ್ಲಿ ಹಲವು ವಾಟ್ಸ್‌ಆ್ಯಪ್ ಗುಂಪುಗಳನ್ನು ಮಾಡಿಕೊಂಡು ಪ್ರಚಾರ ನಡೆಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮತದಾರರ ಮೊಬೈಲ್ ಸಂಖ್ಯೆಗಳನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಬಹುದು ಎಂದು ಆಯೋಗದಪರ ವಕೀಲ ಜಿ. ರಾಜಗೋಪಾಲನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.