ADVERTISEMENT

LIVE| ಪುದುಚೇರಿ ಕಾಂಗ್ರೆಸ್‌ ಸರ್ಕಾರ ಪತನ: ಸಿಎಂ ನಾರಾಯಣಸ್ವಾಮಿ ರಾಜೀನಾಮೆ

ವಿ. ನಾರಾಯಣಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಬಹುಮತ ಸಾಬೀತುಪಡಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್‌–ಡಿಎಂಕೆ ಮೈತ್ರಿಕೂಟದ ಇಬ್ಬರು ಶಾಸಕರು ಭಾನುವಾರ ರಾಜೀನಾಮೆ ನೀಡಿದ್ದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳುವ ಸವಾಲು ಮತ್ತಷ್ಟು ಪ್ರಯಾಸವಾಗಲಿದೆ. ಕಾಂಗ್ರೆಸ್‌ನ ಕೆ. ಲಕ್ಷ್ಮೀನಾರಾಯಣನ್‌ ಮತ್ತು ಡಿಎಂಕೆಗೆ ಸೇರಿದ ವೆಂಕಟೇಶನ್‌ ರಾಜೀನಾಮೆ ನೀಡಿರುವ ಶಾಸಕರು. ಇಬ್ಬರ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್‌–ಡಿಎಂಕೆ ಮೈತ್ರಿಕೂಟದ ಶಾಸಕರ ಸಂಖ್ಯೆ 11ಕ್ಕೆ ಕುಸಿದಿದೆ. ಆದರೆ, ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಏಳು ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಎ.ನಮಶಿವಾಯಂ ಮತ್ತು ಮಲ್ಲಾಡಿ ಕೃಷ್ಣರಾವ್‌ ಸೇರಿದಂತೆ ನಾಲ್ವರು ಕಾಂಗ್ರೆಸ್‌ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 7:09 IST
Last Updated 22 ಫೆಬ್ರುವರಿ 2021, 7:09 IST

ಸ್ಪೀಕರ್‌ ರೂಲಿಂಗ್‌ ಸರಿಯಲ್ಲ: ನಾರಾಯಣಸ್ವಾಮಿ

ಸ್ಪೀಕರ್ ತೀರ್ಪು ತಪ್ಪಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ, ಎಐಎಡಿಎಂಕೆ ಪಕ್ಷಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿವೆ. ಇದು ಪ್ರಜಾಪ್ರಭುತ್ವದ ಕೊಲೆ. ಪುದುಚೇರಿ ಮತ್ತು ಈ ದೇಶದ ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. 

ಪುದುಚೇರಿ ಮುಖ್ಯಮಂತ್ರಿ ಸ್ಥಾನಕ್ಕೆ ವಿ.ನಾರಾಯಣಸ್ವಾಮಿ ರಾಜೀನಾಮೆ

ಬಹುಮತ ಕಳೆದುಕೊಂಡು ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಸೋಮವಾರ ಲೆ.ಜನರಲ್‌ ಗವರ್ನರ್‌‌ ತಮಿಳಿಸೈ ಸೌಂದರ್‌ ರಾಜನ್‌ ಅವರನ್ನು ಭೇಟಿಯಾದ ಪುದಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರು.  

ಉತ್ತರಿಸದೇ ಹೋದ ನಾರಾಯಣಸ್ವಾಮಿ: ವಿಪಕ್ಷ ನಾಯಕ ಟೀಕೆ

ಕೇಳಿದ ಪ್ರಶ್ನೆಗಳಿಗೆ ವಿ ನಾರಾಯಣಸಾಮಿ ಉತ್ತರಿಸದೇ ಹೋಗಿದ್ದಾರೆ. ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಬದಲಿಗೆ ಕೇಂದ್ರದ ವಿರುದ್ಧ ಟೀಕೆಗಳಿಗೆ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದಾರೆ ಎಂದು  ಪುದುಚೇರಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಎನ್ ರಂಗಸಾಮಿ ಆರೋಪಿಸಿದ್ದಾರೆ. 

ADVERTISEMENT

ಪುದುಚೇರಿ ಕಾಂಗ್ರೆಸ್‌ ಸರ್ಕಾರ ಪತನ

ಕಾಂಗ್ರೆಸ್‌ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಹೇಳಿದ ಸ್ಪೀಕರ್‌. ಪುದಚೇರಿ ವಿಧಾನಸಭೆಯಿಂದ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್‌ ಸದಸ್ಯರು ಹೊರನಡೆದರು. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಪತನಗೊಂಡಿತು. 

ಸರ್ಕಾರಕ್ಕೆ ಜನಾಭಿಪ್ರಾಯವಿದೆ: ಸಿಎಂ

ಮುಖ್ಯಮಂತ್ರಿಯಿಂದ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ

ವಿಶ್ವಾಸಮತ ಯಾಚನೆಯ ಗೊತ್ತುವಳಿ ಮಂಡಿಸಿದ ಸಿಎಂ ನಾರಾಯಣಸ್ವಾಮಿ 

ತಮ್ಮ ಸರ್ಕಾರಕ್ಕೆ ಬಹುಮತವಿದೆ ಎಂದು ವಿ ನಾರಾಯಣಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಇದೇ ವೇಳೆ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರದೊಂದಿಗೆ ಬೇಡಿ ನಿರಂತರವಾಗಿ ಸಂಘರ್ಷಕ್ಕಿಳಿದರು. ಇದರ ಹೊರತಾಗಿಯೂ ಸರ್ಕಾರ ಕೋವಿಡ್‌ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ.  ಆದಾಯ ಉತ್ಪಾದನೆ ಸೇರಿದಂತೆ ಹಲವು ವಿಷಯಗಳಲ್ಲಿ ಬೇಡಿ ಅವರು ಸರ್ಕಾರದ ವಿರುದ್ಧ "ಸಂಚು ನಡೆಸಿದ್ದಾರೆ" ಎಂದು ಸಿಎಂ ಆರೋಪಿಸಿದ್ದಾರೆ. 

'ಜನರಿಂದ ತಿರಸ್ಕಾರಕ್ಕೊಳಗಾದವರು ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ನಡೆಸಿದ್ದಾರೆ. ಆದರೂ ನಮ್ಮ ಸರ್ಕಾರ ದೃಢವಾಗಿದೆ,' ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. 

‘ವಿಶ್ವಾಸಮತದಲ್ಲಿ ಜಯಗಳಿಸುತ್ತೇನೆ’

ಚೆನ್ನೈ: ‘ಸೋಮವಾರ ಬಹುಮತ ಸಾಬೀತುಪಡಿಸುವ ವಿಶ್ವಾಸ ನನಗೆ ಇದೆ’ ಎಂದು ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

‘ನಮಗೆ 14 ಶಾಸಕರ ಬೆಂಬಲವಿದೆ. ವಿರೋಧ ಪಕ್ಷದಲ್ಲಿ 11 ಶಾಸಕರಿದ್ದಾರೆ. ಉಳಿದ ಮೂವರು ಶಾಸಕರು ಆಯ್ಕೆಯಾಗಿಲ್ಲ. ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಮೂವರ ನಾಮನಿರ್ದೇಶನದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿಲ್ಲ. ಹೀಗಾಗಿ, ಇವರು ಮತಚಲಾಯಿಸುವ ವಿಷಯ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಸ್ಪೀಕರ್‌ ಅವರು ನಿರ್ಣಯ ಕೈಗೊಳ್ಳಲಿದ್ದಾರೆ. ಸದ್ಯದ ಸಂಖ್ಯೆಗಳನ್ನು ಹೋಲಿಸಿದರೆ ನಾವು ಉತ್ತಮ ಪರಿಸ್ಥಿತಿ ಇಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.

‘ಬಿಜೆಪಿ ಹಣ ಬಲದಿಂದ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ. ಜತೆಗೆ, ಇ.ಡಿ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ಶಾಸಕರು ಮತ್ತು ಸಚಿವರಿಗೆ ಬೆದರಿಕೆ ಹಾಕುತ್ತಿದೆ’ ಎಂದು ಆರೋಪಿಸಿದ್ದಾರೆ.

ವಿಧಾನಸಭೆಗೆ ಆಗಮಿಸಿದ ಮುಖ್ಯಮಂತ್ರಿ ನಾರಾಯಣಸ್ವಾಮಿ

ಬಿಜೆಪಿ ತಮಿಳುನಾಡು ಪ್ರವೇಶಕ್ಕೆ ಪುದಚೇರಿ ದಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.