ಪುದುಚೇರಿ: ಕೋವಿಡ್ ಸತತವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತವು ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಯನ್ನು ಶುಕ್ರವಾರದಿಂದ ಕಡ್ಡಾಯಗೊಳಿಸಿದೆ.
’ಕೊರೊನಾ ಸೋಂಕು ಉಲ್ಭಣಕ್ಕೆ ಈಗಾಗಲೇ ಕೇಂದ್ರಾಡಳಿತ ಪ್ರದೇಶವು ಸಾಕ್ಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಹೆಚ್ಚಳವಾಗುವ ಅಪಾಯವನ್ನು ಕಡಿಮೆ ಮಾಡಲು ತಕ್ಷಣದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದೆ’ ಎಂದು ಜಿಲ್ಲಾಧಿಕಾರಿ ಇ. ವಲ್ಲವನ್ ಹೇಳಿದ್ದಾರೆ.
’ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ, ಕಡಲ ಬದಿ, ಥಿಯೇಟರ್, ಆಫೀಸು, ನಿಲ್ದಾಣ ಮತ್ತು ಕಚೇರಿ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ನೌಕರರಿಂದ ಹಿಡಿದು ಎಲ್ಲರೂ ಮಾಸ್ಕ್ ಧರಿಸತಕ್ಕದ್ದು. ದೈಹಿಕ ಅಂತರ ಕಾಪಾಡಿಕೊಂಡು ಸ್ವಚ್ಛವಾಗಿರತಕ್ಕದ್ದು' ಎಂದು ಆದೇಶಿಸಿದರು.
ಪುದುಚೇರಿಯಲ್ಲಿ ಪ್ರಸ್ತುತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 206ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಇಂದು 6,050 ಪ್ರಕರಣ:
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,050 ಕೊರೊನಾ ಸೋಂಕುಪೀಡಿತ ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 28,303ಕ್ಕೆ ಏರಿಕೆಯಾಗಿದೆ.
ಇದು ಈ ವರ್ಷ ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಪ್ರಮಾಣದ ಪ್ರಕರಣಗಳಾಗಿವೆ.
ಗುರುವಾರ 5,335 ಪ್ರಕರಣಗಳು ಪತ್ತೆಯಾಗಿದ್ದವು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ದೇಶದಲ್ಲಿ ಈ ವರೆಗೆ 4,41,85,858 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ಸಾವಿನ ಸಂಖ್ಯೆ 5,30,943 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.