ADVERTISEMENT

ಡೆಂಗಿ, ಚಿಕುನ್‌ ಗುನ್ಯಾ ತಡೆಗೆ ವಿಶಿಷ್ಟ ಸೊಳ್ಳೆ ಸಂಶೋಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2022, 10:58 IST
Last Updated 6 ಜುಲೈ 2022, 10:58 IST
   

ಪುದುಚೇರಿ: ಸೊಳ್ಳೆ ಕಾಟದಿಂದ ಹೈರಾಣಾಗದವರೇ ಇಲ್ಲ. ಅದರಲ್ಲೂ ಸೊಳ್ಳೆಗಳು ಹರಡುವ ಡೆಂಗಿ, ಚಿಕನ್ ಗುನ್ಯಾದಂತಹ ರೋಗಗಳು ಜನರನ್ನು ಕಾಡುತ್ತಲೇ ಇವೆ. ಇದಕ್ಕೆ ಪೂರ್ಣವಿರಾಮ ಹಾಕಲು ಪುದುಚೇರಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಕೀಟ ನಿಯಂತ್ರಣ ಸಂಶೋಧನಾ ಕೇಂದ್ರವು(ಇಇಆರ್‌ಸಿ) ಹೊಸ ಉಪಾಯ ಮಾಡಿದೆ.

ಹೌದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತಿನಂತೆ, ಡೆಂಗಿ ಮತ್ತು ಚಿಕುನ್ ಗುನ್ಯಾ ಹರಡುವ ಸೊಳ್ಳೆಗಳ ಸಂತಾನವನ್ನೇ ತಡೆದು ಸೋಂಕಿಲ್ಲದ ಸೊಳ್ಳೆಗಳ ಉತ್ಪಾದನೆಗೆ ಸಂಸ್ಥೆ ಮುಂದಾಗಿದೆ.

ಸಂಶೋಧಕರ ಪ್ರಕಾರ, ಅವರು ಪ್ರಯೋಗಾಲಯದಲ್ಲಿ ಸೃಷ್ಟಿಸಿರುವ ಹೆಣ್ಣು ಸೊಳ್ಳೆಗಳನ್ನು ಪರಿಸರಕ್ಕೆ ಬಿಡುತ್ತಾರೆ. ಅವು ಪರಿಸರದಲ್ಲಿರುವ ಗಂಡು ಸೊಳ್ಳೆಗಳ ಜೊತೆ ಸಂಯೋಗಗೊಂಡು ಈ ರೋಗಗಳ(ಡೆಂಗಿ, ಚಿಕುನ್ ಗುನ್ಯಾ) ಸೋಂಕಿಲ್ಲದ ಲಾರ್ವಾಗಳನ್ನು ಉತ್ಪಾದಿಸುತ್ತವೆ.

ADVERTISEMENT

ನಾವು ಈ ವಿಶೇಷ ಸೊಳ್ಳೆಗಳು ಮತ್ತು ಮೊಟ್ಟೆಗಳನ್ನು ಸಂಶೋಧಿಸಿದ್ದು ಯಾವುದೇ ಸಂದರ್ಭ ಬಿಡುಗಡೆ ಮಾಡುವುದಾಗಿ ಐಸಿಎಂಆರ್‌–ವಿಸಿಆರ್‌ಸಿ ನಿರ್ದೇಶಕ ಡಾ. ಅಶ್ವನಿ ಕುಮಾರ್ ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ.

ಮಾರಕ ಡೆಂಗಿ, ಚಿಕುನ್ ಗುನ್ಯಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಈ ಸೊಳ್ಳೆ ಹೊಂದಿದೆ. 4 ವರ್ಷಗಳಿಂದ ನಾವು ಈ ಸಂಶೋಧನೆ ನಡೆಸುತ್ತಿದ್ದೆವು. ಈಗ ಸಂಪೂರ್ಣವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.