ಶ್ರೀನಗರ (ಜಮ್ಮು-ಕಾಶ್ಮೀರ): ಆದಿಲ್ ಹೆಸರಿನ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಪುಲ್ವಾಮ ಮಾದರಿಯ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದನೆಂಬ ಅನುಮಾನವಿದೆ ಎಂದು ಜಮ್ಮು-ಕಾಶ್ಮೀರ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಈ ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಆದಿಲ್ ಹೆಸರಿನ ಯುವಕ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೂ ಸಂಪರ್ಕ ಹೊಂದಿದ್ದಾನೆ. ಈ ಕೃತ್ಯವನ್ನು ನಡೆಸಲು ಅವನೇ ಮುಂದಾಗಿದ್ದನೆಂಬ ಅನುಮಾನವಿದೆ' ಎಂದು ಹೇಳಿದ್ದಾರೆ.
ಅವನು ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶ ಹೊಂದಿದ್ದ. ಆ ಹಿನ್ನೆಲೆಯಲ್ಲಿ 40-45 ಕೆ.ಜಿ ಸುಧಾರಿತ ಸ್ಫೋಟಕಗಳನ್ನು ಹೊತ್ತಿದ್ದ ಕಾರನ್ನು ಚಲಾಯಿಸುತ್ತಿದ್ದನೆಂಬ ಅನುಮಾನವಿದೆ. ನಾವು ಹೊರಗಿನಿಂದ ತಜ್ಞರ ತಂಡಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಲು ಮುಂದಾಗಿದ್ದೇವೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
2019ರಲ್ಲಿ ನಡೆದ ಪುಲ್ವಾಮ ಮಾದರಿಯ ಮತ್ತೊಂದು ಉಗ್ರರ ದಾಳಿಯ ಸಂಚನ್ನು ಭಾರತೀಯ ಸೇನೆ, ಪೊಲೀಸರು ಮತ್ತು ಅರೆ ಸೇನಾಪಡೆಗಳು ಗುರುವಾರ ವಿಫಲಗೊಳಿಸಿವೆ. ಆ ಮೂಲಕ ಭಾರೀ ಅನಾಹುತವೊಂದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.