ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ದೇಶದ ಹಲವೆಡೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ನೆರವಿಗಾಗಿ ಸಿಆರ್‌ಪಿಎಫ್ ಸಹಾಯವಾಣಿ ಆರಂಭಿಸಿದೆ.
ನೆರವಿಗಾಗಿ @CRPFmadadgaar ಎಂಬ ಟ್ವಿಟರ್ ಹ್ಯಾಂಡಲ್ ಆರಂಭಿಸಲಾಗಿದೆ. ರಾಜ್ಯದಿಂದ ಹೊರಭಾಗದಲ್ಲಿ ನೆಲೆಸಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೌರ್ಜನ್ಯಕ್ಕೊಳಗಾದಲ್ಲಿ ಅಥವಾ ಯಾವುದೇ ಸಹಾಯ ಬೇಕಿದ್ದಲ್ಲಿ 24x7 ಟೋಲ್ ಫ್ರೀ ಸಂಖ್ಯೆ 14411 ಅನ್ನು ಸಂಪರ್ಕಿಸಬಹುದು. 7082814411 ಸಂಖ್ಯೆಗೆ ಎಸ್‌ಎಂಎಸ್ ಮಾಡಬಹುದು ಎಂದು ಸಿಆರ್‌ಪಿಎಫ್ ತಿಳಿಸಿದೆ.
ನಮ್ಮ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೇಶದ ಹಲವೆಡೆ ಇರುವ ಕಾಶ್ಮೀರಿ ಯುವಕರು ಪುಲ್ವಾಮಾ ದಾಳಿಯ ಬಳಿಕ ಆರೋಪಿಸಿದ್ದರು. ಈ ವಿಚಾರ ಟ್ವಿಟರ್‌ನಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಕೇಂದ್ರದ ಮಧ್ಯ ಪ್ರವೇಶಕ್ಕೆ ಆಗ್ರಹ: ದೇಶದ ಹಲವು ಭಾಗಗಳಲ್ಲಿರುವ ಕಾಶ್ಮೀರಿ ಯುವಕರ ಹಾಗೂ ವ್ಯಾಪಾರಿಗಳ ಭದ್ರತೆಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ನೆರವಿಗೆ ಮುಂದಾದ ಕರ್ನಾಟಕ ಸರ್ಕಾರ: ಕಾಶ್ಮೀರಿ ವಿದ್ಯಾರ್ಥಿಗಳ ನೆರವಿಗೆ ಕರ್ನಾಟಕ ಸರ್ಕಾರವೂ ಧಾವಿಸಿದೆ.‘ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಒಗ್ಗಟ್ಟಾಗಿರಬೇಕಾದದ್ದು ಬಹಳ ಮುಖ್ಯ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುವುದು, ಹಲ್ಲೆ ಮಾಡುವುದು ಯಾವುದಕ್ಕೂ ಪರಿಹಾರವಲ್ಲ. ಸಹಾಯ ಬೇಕಾಗಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಬಹುದು’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.