ADVERTISEMENT

ಪೋಶೆ ಕಾರು ಅಪಘಾತ: ಜೂ. 5ರವರೆಗೆ ಬಾಲಕ ವೀಕ್ಷಣಾ ಕೇಂದ್ರಕ್ಕೆ

ಪಿಟಿಐ
Published 23 ಮೇ 2024, 15:39 IST
Last Updated 23 ಮೇ 2024, 15:39 IST
<div class="paragraphs"><p>ಪುಣೆಯ ಕಲ್ಯಾಣಿ ನಗರದಲ್ಲಿ ಇತ್ತೀಚೆಗೆ 17ರ ಹರೆಯದ ಬಾಲಕ&nbsp;ಪಾನಮತ್ತನಾಗಿ ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆಸಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಐಶಾರಾಮಿ ‘ಪೋಶೆ’ ಕಾರನ್ನು ಪುಣೆ ನಗರ ಪೊಲೀಶರು ವಶಕ್ಕೆ ತೆಗೆದುಕೊಂಡಿದ್ದಾರೆ</p></div>

ಪುಣೆಯ ಕಲ್ಯಾಣಿ ನಗರದಲ್ಲಿ ಇತ್ತೀಚೆಗೆ 17ರ ಹರೆಯದ ಬಾಲಕ ಪಾನಮತ್ತನಾಗಿ ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆಸಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಐಶಾರಾಮಿ ‘ಪೋಶೆ’ ಕಾರನ್ನು ಪುಣೆ ನಗರ ಪೊಲೀಶರು ವಶಕ್ಕೆ ತೆಗೆದುಕೊಂಡಿದ್ದಾರೆ

   

– ಪಿಟಿಐ ಚಿತ್ರ

ಪುಣೆ: ಐಶಾರಾಮಿ ಕಾರು ‘ಪೋಶೆ’ ಚಲಾಯಿಸಿ ಬೈಕ್‌ಗೆ ಡಿಕ್ಕಿಹೊಡಿಸಿದ ಪರಿಣಾಮ ಇಬ್ಬರು ಟೆಕಿಗಳು ಮೃತಪಟ್ಟ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ (ಸಿಸಿಎಲ್‌) 17 ವರ್ಷದ ಬಾಲಕನನ್ನು ಬಾಲಾಪರಾಧ ನ್ಯಾಯ ಮಂಡಳಿಯ (ಜೆಜೆಬಿ) ಆದೇಶದ ನಂತರ ವೀಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ADVERTISEMENT

ಪಾನಮತ್ತನಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಬಾಲಕನನ್ನು ಪೊಲೀಸರು ಹಾಜರುಪಡಿಸಿದ ಒಂದೇ ತಾಸಿನಲ್ಲಿ ಜೆಜೆಬಿಯು ಜಾಮೀನು ನೀಡಿ ಬಿಡುಗಡೆ ಮಾಡಿತ್ತು. 15 ದಿನಗಳೊಳಗೆ ರಸ್ತೆ ಸುರಕ್ಷತಾ ನಿಯಮಗಳು ಮತ್ತು ಮೋಟಾರು ವಾಹನ ಕಾಯ್ದೆ ಬಗ್ಗೆ ಅರಿತು 300 ಪದಗಳ ಪ್ರಬಂಧ ಸಲ್ಲಿಸಲು ಬಾಲಕನಿಗೆ ಸೂಚಿಸಿತ್ತು. ಈ ಆದೇಶವು ವ್ಯಾಪಕ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿತ್ತು.

ಜಾಮೀನು ರದ್ದುಪಡಿಸಲು ಮತ್ತು ಘೋರ ಅಪರಾಧ ಎಸಗಿರುವ ಬಾಲಕನನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿಸುವಂತೆ ಪೊಲೀಸರು ಜೆಜೆಬಿ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಬಾಲಕನಿಗೆ ನೋಟಿಸ್‌ ಜಾರಿ ಮಾಡಿ, ಬುಧವಾರ ವಿಚಾರಣೆ ನಡೆಸಿದ ಜೆಜೆಬಿ, ಆತನನ್ನು ಜೂನ್‌ 5ರವರೆಗೆ ಬಾಲ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲು ಆದೇಶಿಸಿತು.

30ಕ್ಕೂ ಹೆಚ್ಚು ಮಂದಿ ಅಪ್ರಾಪ್ತರನ್ನು ಇರಿಸಲಾಗಿರುವ, ಯರವಾಡದಲ್ಲಿರುವ ನೆಹರೂ ಉದ್ಯೋಗ ಕೇಂದ್ರದ ಬಾಲ ವೀಕ್ಷಣಾ ಕೇಂದ್ರಕ್ಕೆ ಈ ಬಾಲಕನನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಪರಿವೀಕ್ಷಣಾ ಕೇಂದ್ರದಲ್ಲಿ ತಂಗಿರುವಾಗ ಬಾಲಕನ ಮಾನಸಿಕ ಸ್ಥಿತಿಗತಿಯ ಮೌಲ್ಯಮಾಪನ ನಡೆಯಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆಜೆಬಿ ವಿಚಾರಣೆಯಲ್ಲಿ ಬಾಲಕನನ್ನು ಪ್ರತಿನಿಧಿಸಿದ ವಕೀಲ ಪ್ರಶಾಂತ್ ಪಾಟೀಲ್, ‘ಬಾಲಕನನ್ನು ವಯಸ್ಕನೆಂದು ಪರಿಗಣಿಸಬೇಕೇ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆಯು ಮನೋವೈದ್ಯರು ಮತ್ತು ಆಪ್ತಸಮಾಲೋಚಕರು ನೀಡುವ ​ವರದಿಗಳನ್ನು ಆಧರಿಸಿದೆ. ಇದಕ್ಕೆ ಕನಿಷ್ಠ ಎರಡು ತಿಂಗಳು ಬೇಕಾಗಲಿದ್ದು, ನಂತರ ಜೆಜೆಬಿಯು ತನ್ನ ನಿರ್ಧಾರ ಪ್ರಕಟಿಸುತ್ತದೆ’ ಎಂದು ಹೇಳಿದ್ದಾರೆ. 

‘ಬಾಲಕನಿಗೆ ನೀಡಿದ್ದ ಜಾಮೀನು ರದ್ದಾಗಿಲ್ಲ’

ಬಾಲಕನಿಗೆ ಭಾನುವಾರ ನೀಡಿದ್ದ ಜಾಮೀನನ್ನು ಬುಧವಾರ ಸಂಜೆ ಜೆಜೆಬಿ ರದ್ದುಗೊಳಿಸಿದೆ ಎಂದು ಪೊಲೀಸರು ಹೇಳಿದ್ದರೆ ಅವರ ವಕೀಲರು ‘ಜಾಮೀನು ರದ್ದಾಗಿಲ್ಲ’ ಎಂದು ಪ್ರತಿಪಾದಿಸಿದ್ದು ವಯಸ್ಕನೆಂದು ಪರಿಗಣಿಸಲು ಪೊಲೀಸರು ಸಲ್ಲಿಸಿರುವ ಅರ್ಜಿ ಬಗ್ಗೆ ಜೆಜೆಬಿ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ.

‘ಜೆಜೆಬಿ ಹೊರಡಿಸಿದ ಕಾರ್ಯಾದೇಶದ ಪ್ರಕಾರ ಬಾಲಕನನ್ನು ಜೂನ್ 5ರವರೆಗೆ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವನನ್ನು ವಯಸ್ಕನೆಂದು ಪರಿಗಣಿಸಲು ಕೋರಿರುವ ಅರ್ಜಿ ಬಗ್ಗೆ ಜೆಜೆಬಿಯಿಂದ ಇನ್ನೂ ಆದೇಶ ಬಂದಿಲ್ಲ’ ಎಂದು ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ಬುಧವಾರ ಸಷ್ಟಪಡಿಸಿದ್ದಾರೆ.

ಬಾಲಕನ ತಾತನ ವಿಚಾರಣೆ 

  ‘ಪೋಶೆ’ ಕಾರು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿರುವ ಬಾಲಕನ ತಾತನನ್ನು ಪುಣೆ ಪೊಲೀಸರು ಗುರುವಾರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕನಿಗೆ ಕಾರು ಚಲಾಯಿಸಲು ಅನುಮತಿಸಿದ ಅಪರಾಧದಲ್ಲಿ ಆತನ ತಂದೆ ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ್‌ ಅಗರ್‌ವಾಲ್‌ ಬಾಲಕನಿಗೆ ಮದ್ಯ ಪೂರೈಸಿದ ಅಪರಾಧದಲ್ಲಿ ಎರಡು ಮದ್ಯ ಮಾರಾಟ ಸಂಸ್ಥೆಗಳ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ತಾತನನ್ನು ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. 

‘ಬಾಲಕನ ತಾತನ ವಿಚಾರಣೆಯನ್ನು ಪುಣೆ ಪೊಲೀಸ್ ಕಮಿಷನರೇಟ್‌ನಲ್ಲಿ ಅಪರಾಧ ವಿಭಾಗದ ಪೊಲೀಸರು ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದರು. ಬಾಲಕನಿಗೆ ₹7500 ಶ್ಯೂರಿಟಿ ಮತ್ತು ಆತನನ್ನು ಕೆಟ್ಟವರ ಸಹವಾಸದಿಂದ ದೂರವಿಡುವುದಾಗಿ ಆತನ ತಾತ ನೀಡಿದ ಭರವಸೆ ಮೇಲೆ ಜೆಜೆಬಿ ಭಾನುವಾರ ಜಾಮೀನು ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.