ಪುಣೆ: ಪೋಶೆ ಕಾರು ಅಪಘಾತ ಪ್ರಕರಣ ಸಂಬಂಧ ಬಾಲಕನಿಗೆ ಜಾಮೀನು ಆದೇಶ ಹೊರಡಿಸುವಾಗ ಬಾಲನ್ಯಾಯ ಮಂಡಳಿಯ ಸದಸ್ಯರು ನಿಯಮ ಪಾಲಿಸಿದ್ದಾರೆಯೇ ಎಂದು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಸಮಿತಿ ರಚಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ರಾಜ್ಯ ಮಹಿಳಾ ಹಾಗೂ ಮಕ್ಕಳು ಕಲ್ಯಾಣ ಇಲಾಖೆಯು ಕಳೆದ ವಾರ ಐದು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಲಾಖೆಯ ಉಪ ಆಯುಕ್ತ ಶ್ರೇಣಿಯ ಅಧಿಕಾರಿಯೊಬ್ಬರು ಸಮಿತಿಯ ನೇತೃತ್ವ ವಹಿಸಿದ್ದು, ಮುಂದಿನ ವಾರ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಘಟನೆ ನಡೆಯುವ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ಹೇಳಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ 300 ಪದಗಳ ಪ್ರಬಂಧ ಬರೆಯುವಂತೆ ಬಾಲಕನಿಗೆ ಹೇಳಿ ಬಾಲನ್ಯಾಯ ಮಂಡಳಿ ಜಾಮೀನು ನೀಡಿತ್ತು. ಇದು ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು.
‘ಬಾಲನ್ಯಾಯ ಮಂಡಳಿಯ ಒಟ್ಟಾರೆ ನಡತೆಯ ಬಗ್ಗೆ ತನಿಖೆ ನಡೆಸಲು ನಾವು ಸಮಿತಿ ರಚನೆ ಮಾಡಿದ್ದೇವೆ. ಜಾಮೀನು ಆದೇಶ ಹೊರಡಿಸುವಾಗ ಬಾಲನ್ಯಾಯ ಮಂಡಳಿಯ ಸದಸ್ಯರು ನಿಯಮ ಪಾಲಿಸಿದ್ದಾರೆಯೇ ಎಂದು ತನಿಖೆ ನಡೆಸಲಿದೆ. ಜಾಮೀನು ನೀಡಿದ ತಕ್ಷಣವೇ ಸಮಿತಿ ರಚಿಸಲಾಗಿತ್ತು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತ ಪ್ರಶಾಂತ್ ನರ್ನವಾರೆ ತಿಳಿಸಿದ್ದಾರೆ.
ಬಾಲಕನ ರಕ್ತದ ಮಾದರಿಯನ್ನು ತಿರುಚಿದ ಆರೋಪ ಪ್ರಕರಣವನ್ನು ಮೂರು ಮಂದಿಯ ಇನ್ನೊಂದು ಸಮಿತಿ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.