ADVERTISEMENT

ಪುಣೆ | ಅಪ್ರಾಪ್ತ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅಪಘಾತ: ಇಬ್ಬರ ಸಾವು

ಪಿಟಿಐ
Published 20 ಮೇ 2024, 9:46 IST
Last Updated 20 ಮೇ 2024, 9:46 IST
<div class="paragraphs"><p>ಕಾರು ಚಲಾಯಿಸುತ್ತಿದ್ದ&nbsp;ಅಪ್ರಾಪ್ತನಿಗೆ&nbsp;ಥಳಿಸುತ್ತಿರುವ ಜನರು</p></div>

ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನಿಗೆ ಥಳಿಸುತ್ತಿರುವ ಜನರು

   

( ಚಿತ್ರ ಕೃಪೆ–@JournoSiddhant)

ಪುಣೆ (ಮಹಾರಾಷ್ಟ್ರ): ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಲ್ಯಾಣಿ ನಗರದಲ್ಲಿ ಭಾನುವಾರ ಬೆಳಗಿನ ಜಾವ 3.15ರ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿ ಸ್ನೇಹಿತರ ಗುಂಪೊಂದು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರನ್ನು ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಕಾರು ಚಲಾಯಿಸುತ್ತಿದ್ದ 17 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಬಂಧಿಸಿ ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77ರ ಅಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಲ್ಯಾಣಿ ನಗರ ಜಂಕ್ಷನ್ ಬಳಿ, ವೇಗವಾಗಿ ಬಂದ ಐಷಾರಾಮಿ ಕಾರೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಹಲವು ಅಡಿಗಳಷ್ಟು ಎತ್ತರದವರೆಗೆ ಹಾರಿ, ಇನ್ನೊಂದು ಕಾರಿನ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಕಾರು ಪಾದಚಾರಿ ಮಾರ್ಗದ ಕಂಬಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತಕ್ಕೀಡಾದ ಬಳಿಕ ಕಾರಿನಿಂದ ಹೊರಬರಲು ಯತ್ನಿಸಿದ ಬಾಲಕನಿಗೆ ಜನರ ಗುಂಪೊಂದು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕಾರು ಚಲಾಯಿಸುತ್ತಿದ್ದ ಬಾಲಕನ ವಿರುದ್ಧ ಯರವಾಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 279 (ಅತಿವೇಗದ ಚಾಲನೆ) 304ಎ(ನಿರ್ಲಕ್ಷ್ಯದಿಂದ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವುದು) 337 ( ಮನುಷ್ಯನ ಜೀವಕ್ಕೆ ಅಥವಾ ಸುರಕ್ಷತೆಗೆ ಅಪಾಯ ಉಂಟು ಮಾಡುವುದು) 338 ( (ಗಂಭೀರ ಗಾಯಕ್ಕೆ ಕಾರಣವಾಗುವುದು) ಹಾಗೂ ಮೋಟಾರು ವಾಹನಗಳ ಕಾಯಿದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.