ಪುಣೆ (ಮಹಾರಾಷ್ಟ್ರ): ಪರವಾನಗಿ ಹೊಂದಿದ್ದ ಬಂದೂಕು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರಿಗೆ ಪುಣೆ ಪೊಲೀಸರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಮನೋರಮಾ ಅವರ ಬಂಗಲೆಯ ಸುತ್ತ ಗೋಡೆಗೆ ಹೊಂದಿಕೊಂಡಿರುವ ಅನಧಿಕೃತ ಕಟ್ಟಡವನ್ನು ಏಳು ದಿನಗಳ ಒಳಗಾಗಿ ತೆರವುಗೊಳಿಸುವಂತೆ ಸೂಚನೆ ನೀಡಿ ಪುಣೆ ಮಹಾನಗರ ಪಾಲಿಕೆಯು ಶನಿವಾರ ನೋಟಿಸ್ ಜಾರಿ ಮಾಡಿತ್ತು.
‘ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಲು ‘ಓಂ ದೀಪ್’ ಬಂಗಲೆಗೆ ತೆರಳಿದ್ದರು. ಆದರೆ, ಬಾಗಿಲು ತೆಗೆಯದ ಕಾರಣ ಬಂಗಲೆಯ ಗೋಡೆಗೆ ನೋಟಿಸ್ ಅಂಟಿಸಿದರು’ ಎಂದು ಅವರು ತಿಳಿಸಿದ್ದರು.
ಮನೋರಮಾ ಅವರು ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಬಂದೂಕು ಹಿಡಿದು ಕೆಲವರನ್ನು ಬೆದರಿಸುತ್ತಿದ್ದ ವಿಡಿಯೊ ಹರಿದಾಡಿತ್ತು. ಇದರ ಬೆನ್ನಲ್ಲೇ, ಪೂಜಾ ಪೋಷಕರಾದ ಮನೋರಮಾ ಮತ್ತು ದಿಲೀಪ್ ಖೇಡ್ಕರ್ ಹಾಗೂ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಬಂದೂಕು ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ಮನೋರಮಾ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 10 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಪೂಜಾ ಖೇಡ್ಕರ್ ಅವರ ಐಷಾರಾಮಿ ಔಡಿ ಕಾರನ್ನು ಪುಣೆಯ ಚತುರ್ಶೃಂಗಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಖಾಸಗಿ ಕಾರಿಗೆ ಅಕ್ರಮವಾಗಿ ಅಳವಡಿಸಿದ್ದ ಕೆಂಪು ದೀಪ ಹಾಗೂ ‘ಮಹಾರಾಷ್ಟ್ರ ಸರ್ಕಾರ’ ಎಂಬ ನಾಮಫಲಕವನ್ನು ತೆರವುಗೊಳಿಸಲಾಗಿದೆ. ಜತೆಗೆ ಕಾರಿನ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.