ಮುಂಬೈ: ಪೋಶೆ ಕಾರು ಅಪಘಾತದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ 17 ವರ್ಷ ವಯಸ್ಸಿನ ಬಾಲಕನನ್ನು ಕೂಡಲೇ ವೀಕ್ಷಣಾಗೃಹದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
ಬಾಲಕನನ್ನು ವೀಕ್ಷಣಾಗೃಹದಲ್ಲಿ ಇರಿಸುವಂತೆ ಬಾಲ ನ್ಯಾಯ ಮಂಡಳಿ (ಜೆಜೆಬಿ) ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು ರದ್ದುಗೊಳಿಸಿದೆ.
ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿದ್ದೇವೆ. ಕಾನೂನು ಸಂಘರ್ಷಕ್ಕೊಳಗಾಗಿರುವ ಬಾಲಕನು ಅರ್ಜಿದಾರರ (ಸೋದರ ಸಂಬಂಧಿ) ಪಾಲನೆಯಲ್ಲಿ ಇರಲಿದ್ದಾನೆ ಎಂದು ಪೀಠ ಹೇಳಿದೆ.
ಪ್ರಕರಣದ ಕುರಿತು ವ್ಯಕ್ತವಾದ ಅಭಿಪ್ರಾಯದ ಕುರಿತು ಮಾತನಾಡಿದ ನ್ಯಾಯಾಲಯ, ‘ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ವಯಸ್ಸನ್ನು ಯಾರೂ ಪರಿಗಣಿಸಲಿಲ್ಲ. ಆತನಿಗೆ 18 ವರ್ಷ ವಯಸ್ಸನ್ನು ದಾಟಿಲ್ಲ. ಅದನ್ನೂ ಪರಿಗಣಿಸಬೇಕು’ ಎಂದಿತು.
ಬಾಲಕನು ಈಗಾಗಲೇ ಪುನರುಜ್ಜೀವನ ಕೇಂದ್ರದಲ್ಲಿ ಇದ್ದಾನೆ. ಆತನಿಗೆ ಮನೋವೈದ್ಯರಿಂದ ಸಮಾಲೋಚನೆ ಕೊಡಿಸಲಾಗುತ್ತಿದೆ. ಇದು ಮುಂದುವರಿಯಲಿದೆ ಎಂದು ಪೀಠ ಹೇಳಿದೆ.
ಮೇ 19ರಂದು ನಡೆದಿದ್ದ ಈ ಅಪಘಾತದಲ್ಲಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.