ADVERTISEMENT

ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಬಂಧನ; ಬಿಡುಗಡೆ

ಪಿಟಿಐ
Published 2 ಫೆಬ್ರುವರಿ 2019, 17:37 IST
Last Updated 2 ಫೆಬ್ರುವರಿ 2019, 17:37 IST
ಆನಂದ್‌ ತೇಲ್ತುಂಬ್ಡೆ
ಆನಂದ್‌ ತೇಲ್ತುಂಬ್ಡೆ    

ಮುಂಬೈ/ಪುಣೆ: ನಕ್ಸಲ್‌ ಸಂಪರ್ಕ ಆರೋಪದ ಎಲ್ಗಾರ್‌ ಪರಿಷದ್‌ ಪ್ರಕರಣದಲ್ಲಿ ಪುಣೆ ಪೊಲಿಸರಿಂದ ಶನಿವಾರ ಮುಂಜಾನೆ ಬಂಧಿಸಲ್ಪಟ್ಟಿದ್ದ ದಲಿತ ಚಿಂತಕ ಪ್ರೊ.ಆನಂದ್‌ ತೇಲ್ತುಂಬ್ಡೆ ಅವರನ್ನು ಪುಣೆ ಸೆಷನ್‌ ಕೋರ್ಟ್‌ ಬಿಡುಗಡೆ ಮಾಡಿದೆ.

ಗೋವಾ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ತೇಲ್ತುಂಬ್ಡೆ ಅವರು ಕೇರಳದಿಂದ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮುಂಬೈ ಪೊಲೀಸರು ವಶಕ್ಕೆ ಪಡೆದರು. ನಂತರ ಪುಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಎಲ್ಗಾರ್‌ ಪರಿಷತ್‌ ಪ್ರಕರಣದಲ್ಲಿ ಆನಂದ್‌ ತೇಲ್ತುಂಬ್ಡೆ ಅವರನ್ನು ಬಂಧಿಸಿರುವುದು ‘ಅಕ್ರಮ’ ಎಂದ ಪುಣೆ ಸೆಷನ್‌ ಕೋರ್ಟ್‌ ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಶನಿವಾರ ಆದೇಶ ನೀಡಿತು. ಇದರಿಂದಾಗಿ ಪುಣೆ ಪೊಲೀಸರಿಗೆ ಮುಖಭಂಗವಾದಂತಾಯಿತು. ಕೋರ್ಟ್‌ ಆದೇಶದ ನಂತರ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದರು.

ADVERTISEMENT

ನಕ್ಸಲ್‌ ಚಟುವಟಿಕೆಯಲ್ಲಿ ತೇಲ್ತುಂಬ್ಡೆ ತೊಡಗಿರುವುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳು ಪುಣೆ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದ್ದರು.

ತನ್ನ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದ ನಂತರ, ಬಂಧಿಸದಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುಣೆ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತ್ತು. ಮರು ದಿನವೇ ಪುಣೆ ಪೊಲೀಸರು ಅವರನ್ನು ಬಂಧಿಸಿದ್ದರು.

ತೇಲ್ತುಂಬ್ಡೆ ಅವರ ವಕೀಲ ರೋಹನ್ ನಹರ್, ‌ತೇಲ್ತುಂಬ್ಡೆ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದರೂ, ನಾಲ್ಕು ವಾರಗಳ ಕಾಲ ಬಂಧಿಸದಂತೆ ತಡೆ ನೀಡಿದೆ. ಬಂಧನ ವಿರುದ್ಧದ ರಕ್ಷಣೆ ಅವಧಿ ಫೆಬ್ರುವರಿ 11ರವರೆಗೂ ಇದೆ.ಸಕ್ಷಮ ಪ್ರಾಧಿಕಾರಗಳಾದ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್ ಮುಂದೆ ಕಾನೂನು ಪರಿಹಾರಕ್ಕೆ ಮನವಿ ಮಾಡಲು ಅವಕಾಶವಿದೆ ಎಂದು ಪುಣೆ ಸೆಷನ್‌ ಕೋರ್ಟ್‌ ಗಮನಕ್ಕೆ ತಂದರು.

ವಕೀಲರ ವಾದ ಪುರಸ್ಕರಿಸಿದ ಸೆಷನ್‌ ನ್ಯಾಯಾಲಯದ ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ಕಿಶೋರ್‌ ವಡಾನೆ, ತೇಲ್ತುಂಬ್ಡೆಯವರನ್ನು ತಕ್ಷಣವೇ ಬಿಡುಗಡೆಗೊಳಿಸಲು ಆದೇಶ ನೀಡಿದರು.

ಇದಕ್ಕೂ ಮೊದಲು ‘ತೇಲ್ತುಂಬ್ಡೆ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪುಣೆ ಪೊಲೀಸ್‌ ಜಂಟಿ ಕಮಿಷನರ್‌ ಶಿವಾಜಿ ಬೋಡ್ಖೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.