ADVERTISEMENT

ಪಂಜಾಬ್‌ ರೈತರು ದುರ್ಬಲರೆಂದು ಭಾವಿಸಬೇಡಿ: ಬಿಜೆಪಿಗೆ ಎಚ್ಚರಿಕೆ ನೀಡಿದ ಅಕಾಲಿ ದಳ

ಏಜೆನ್ಸೀಸ್
Published 20 ಸೆಪ್ಟೆಂಬರ್ 2020, 10:39 IST
Last Updated 20 ಸೆಪ್ಟೆಂಬರ್ 2020, 10:39 IST
ಪಂಜಾಬ್‌ ರಾಜಧಾನಿ ಅಮೃತಸರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳ
ಪಂಜಾಬ್‌ ರಾಜಧಾನಿ ಅಮೃತಸರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳ   

ನವದೆಹಲಿ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ (ಸಬಲೀಕರಣ ಮತ್ತು ರಕ್ಷಣೆ) ಮಸೂದೆಗಳನ್ನು ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕರಿಸಲಾಗಿದೆ. ಇದಕ್ಕೆ ಪ್ರತಿಪಕ್ಷಗಳೂ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಶಿರೋಮಣಿ ಅಕಾಲಿ ದಳದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ಶಿರೋಮಣಿ ಅಕಾಲಿ ದಳದ ನಾಯಕ ನರೇಶ್‌ ಗುಜ್ರಾಲ್‌, 'ಪಂಜಾಬ್‌ನ ರೈತರು ದುರ್ಬಲರಲ್ಲ' ಎಂದು ಎಚ್ಚರಿಸಿದ್ದಾರೆ.

ರೈತರ ಸಂಕಷ್ಟಗಳಿಗೆ ಪರಿಹಾರ ಸಿಗುವವರೆಗೂ ಮಸೂದೆಗಳನ್ನು ತಡೆಹಿಡಿಯುವಂತೆ ಅಕಾಲಿ ದಳವು ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ, ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಲು ಬಿಜೆಪಿ ನಿರ್ಧರಿಸಿದ್ದರಿಂದ ಅಕಾಲಿ ದಳದ ನಾಯಕರು ಅದರ ವಿರುದ್ಧ ಮತ ಚಲಾಯಿಸಿದ್ದರು.

ADVERTISEMENT

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದರು. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿದ್ದ ಅವರು ಮೋದಿ ಸರ್ಕಾರದಲ್ಲಿದ್ದ ಏಕೈಕ ಶಿರೋಮಣಿ ಅಕಾಲಿದಳ ಪ್ರತಿನಿಧಿಯಾಗಿದ್ದರು.

ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರು 'ತಮ್ಮದು ರೈತರ ಪಕ್ಷ' ಎಂದು ಪ್ರತಿಪಾದಿಸಿದ್ದಾರೆ.

'ಕೃಷಿ ಸಂಬಂಧಿತ ಮಸೂದೆಯ ಬಗೆಗಿನ ಎರಡು ತಿಂಗಳ ಚರ್ಚೆಯ ಹೊರತಾಗಿಯೂ ಮಿತ್ರಪಕ್ಷ ಬಿಜೆಪಿಯನ್ನು ಮನವೊಲಿಸುವಲ್ಲಿ ನಾವು ವಿಫಲರಾಗಿದ್ದೇವೆ. ರೈತರ ಹಕ್ಕುಗಳ ಬಗ್ಗೆ ಗಮನಹರಿಸದ ಸರ್ಕಾರವೊಂದರ ಭಾಗವಾಗಿರಲು ನಮಗೆ ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.

ಕೃಷಿ ಮಸೂದೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ ರೈತರು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.