ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ.
ಬರ್ನಾಲಾ ಜಿಲ್ಲೆಯ ಬದೌರ್‌ನಲ್ಲಿ ಲಾಭ್ ಸಿಂಗ್ ಉಗೋಕೆ ಎಂಬುವವರು ಚನ್ನಿ ಅವರನ್ನು ಮಣಿಸಿದ್ದಾರೆ. ರೂಪನಗರ ಜಿಲ್ಲೆಯ ಚಮ್‌ಕೌರ್‌ನಲ್ಲಿ ಚರಣ್‌ಜಿತ್ ಸಿಂಗ್ ಎಂಬುವರ ಎದುರು ಚನ್ನಿ ಸೋತಿದ್ದಾರೆ.
ಚನ್ನಿ ಅವರು ಆರಿಸಿಕೊಂಡಿದ್ದ ಹೊಸ ಕ್ಷೇತ್ರ ಬದೌರ್‌ನಲ್ಲಿ ಲಾಬ್ ಸಿಂಗ್ 63,967 ಮತ ಪಡೆದರೆ, ಚನ್ನಿ ಕೇವಲ 26,409 ಮತ ಪಡೆದರು. ಚಮ್‌ಕೌರ್‌ನಲ್ಲಿ ವಿಜೇತ ಅಭ್ಯರ್ಥಿ ಚರಣ್‌ಜಿತ್ 70,248 ಮತ ಪಡೆದರೆ, ಚನ್ನಿ 62,306 ಮತ ಪಡೆದು ಪರಾಭವರಾದರು. ಚಮ್‌ಕೌರ್ ಸಾಹೀಬದಲ್ಲಿ ಚನ್ನಿ 2007ರಿಂದ ಗೆಲ್ಲುತ್ತಾ ಬಂದಿದ್ದರು.
ಯಾರು ಲಾಬ್ ಸಿಂಗ್ ಉಕೋಕ್
ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಬದೌರ್ ಕ್ಷೇತ್ರದಲ್ಲಿ ಮಣಿಸಿದ್ದು ಲಾಬ್ ಸಿಂಗ್ ಉಗೋಕೆ. ಇವರು 2013ರಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದರು. ಉಗೋಕೆಯವರ ತಂದೆ ವೃತ್ತಿಯಿಂದ ಚಾಲಕ. ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ನಿರ್ಹಹಿಸುತ್ತಿದ್ದಾರೆ. ಉಗೋಕೆ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದು, ಪಿಯುಸಿ ಪಾಸಾಗಿದ್ದಾರೆ. ‘ನನಗೆ, ಬದೌರ್ ಕ್ಷೇತ್ರ ಮಾತ್ರವೇ ಅಲ್ಲ. ಇದು ನನ್ನ ಕುಟುಂಬ. ಚನ್ನಿ ಸಾಹೇಬ್‌ಗೆ ಬದೌರ್‌ನ 10 ಹಳ್ಳಿಗಳ ಹೆಸರೂ ತಿಳಿದಿಲ್ಲ. ಚನ್ನಿ ಸಾಹಬ್‌ಗೆ ಬದೌರ್ ಎಂದರೆ ಕ್ಷೇತ್ರ ಮಾತ್ರ’ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಚರಣ್‌ಜಿತ್ ಸಿಂಗ್ ಬಗ್ಗೆ
ಚಮಕೌರ್ ಕ್ಷೇತ್ರದಲ್ಲಿ ಚನ್ನಿ ಅವರನ್ನು ಸೋಲಿಸಿದ್ದು ಡಾ. ಚರಣ್‌ಜಿತ್ ಸಿಂಗ್. ವೃತ್ತಿಯಲ್ಲಿ ನೇತ್ರ ತಜ್ಞರಾಗಿರುವ ಚರಣ್‌ಜಿತ್ ಸಿಂಗ್, ಸಮಾಜ ಸೇವಕರೂ ಹೌದು. ಸದ್ಯ ಅವರು ಪಂಜಾಬ್‌ನ ಎಎಪಿ ಘಟಕದ ವೈದ್ಯರ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.