ADVERTISEMENT

ಪಂಜಾಬ್‌ ಸಿಎಂ ತಮ್ಮನಿಗೆ ಸಿಗದ ಕಾಂಗ್ರೆಸ್ ಟಿಕೆಟ್; ಸ್ವತಂತ್ರರಾಗಿ ಅಖಾಡಕ್ಕೆ!

ಪಿಟಿಐ
Published 16 ಜನವರಿ 2022, 13:10 IST
Last Updated 16 ಜನವರಿ 2022, 13:10 IST
ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ
ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ   

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ತಮ್ಮ ಮನೋಹರ್‌ ಸಿಂಗ್‌ ಅವರು ಬಸ್ಸಿ ಪಠಾನಾ ವಿಧಾನಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಆ ಕ್ಷೇತ್ರದ ಹಾಲಿ ಶಾಸಕರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ.

ಕಾಂಗ್ರೆಸ್‌ ಪಕ್ಷವು ಪಂಜಾಬ್‌ನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಬಸ್ಸಿ ಪಠಾನಾ (ಎಸ್‌ಸಿ) ಕ್ಷೇತ್ರದಿಂದ ಪಕ್ಷದ ಶಾಸಕ ಗುರ್‌ಪ್ರೀತ್‌ ಸಿಂಗ್‌ ಜಿ.ಪಿ. ಅವರಿಗೆ ಟಿಕೆಟ್‌ ನೀಡಿದೆ. ಪಕ್ಷದ ಪ್ರಕಟಣೆಯ ಬಗ್ಗೆ ಅಸಮಾಧಾನ ಹೊರ ಹಾಕಿರುವ ಮನೋಹರ್‌ ಸಿಂಗ್‌, ಕಾಂಗ್ರೆಸ್‌ ಪಕ್ಷವು ಗುರ್‌ಪ್ರೀತ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಿರುವುದು ಕ್ಷೇತ್ರದ ಜನರಿಗೆ ಮಾಡಿರುವ 'ಅನ್ಯಾಯ' ಹಾಗೂ ಹಾಲಿ ಶಾಸಕರು 'ಅಸಮರ್ಥ ಹಾಗೂ ದಕ್ಷತೆ ಇಲ್ಲದವರು' ಎಂದಿದ್ದಾರೆ.

ಮನೋಹರ್‌ ಸಿಂಗ್‌

'ಬಸ್ಸಿ ಪಠಾನಾ ಕ್ಷೇತ್ರದ ಹಲವು ಪ್ರಮುಖರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನನಗೆ ಕೇಳಿದ್ದಾರೆ. ನಾನು ಅವರು ತಿಳಿಸಿರುವಂತೆಯೇ ಮಾಡುವೆನು. ಹಿಂಜರಿಯುವ ಪ್ರಶ್ನೆಯೇ ಇಲ್ಲ, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಂಡಿತ' ಎಂದು ಮನೋಹರ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

ಖರಡ್‌ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿರುವ ಮನೋಹರ್‌ ಸಿಂಗ್‌ ಅವರು, ಎಂಬಿಬಿಎಸ್‌ ಮತ್ತು ಎಂಡಿ ಪದವೀಧರರು. ಜೊತೆಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಶಿಕ್ಷಣವನ್ನೂ ಪಡೆದಿದ್ದಾರೆ.

ಕ್ಷೇತ್ರದ ಪುರಸಭೆಗಳ ಹಲವು ಸದಸ್ಯರು, ಗ್ರಾಮಗಳ ಸರಪಂಚರು ಹಾಗೂ ಪಂಚ್‌ಗಳನ್ನು (ಗ್ರಾಮ ಪಂಚಾಯಿತಿ ಸದಸ್ಯರು) ಭೇಟಿ ಮಾಡಿದ ನಂತರವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವೆ ಎಂದು ತಿಳಿಸಿದ್ದಾರೆ.

ಅಣ್ಣ ಚನ್ನಿ ಅವರೊಂದಿಗೂ ಮಾತನಾಡುವೆ ಹಾಗೂ ನನ್ನ ನಿರ್ಧಾರದ ಕುರಿತು ಮನವೊಲಿಸುವೆ ಎಂದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಗೆ ಕಾಂಗ್ರೆಸ್‌ 'ಒಂದು ಕುಟುಂಬ–ಒಂದು ಟಿಕೆಟ್‌' ಸೂತ್ರ ಅನುಸರಿಸುತ್ತಿದೆ. ಜಲಂಧರ್‌ ಕ್ಷೇತ್ರದ ಸಂಸದ ಸಂತೋಖ್‌ ಸಿಂಗ್‌ ಚೌಧರಿ ಅವರ ಮಗ ವಿಕ್ರಮ್‌ಜಿತ್‌ ಸಿಂಗ್‌ ಚೌಧರಿ ಅವರಿಗೆ ಫಿಲೌರ್‌ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಹಾಗೇ ಫತೇಗಡ ಸಾಹಿಬ್‌ ಸಂಸದ ಅಮರ್‌ ಸಿಂಗ್‌ ಅವರ ಮಗ ಕಮಿಲ್‌ ಅಮರ್‌ ಸಿಂಗ್‌ ಅವರಿಗೆ ರಾಯ್‌ಕೋಟ್‌ನಿಂದ ಟಿಕೆಟ್‌ ನೀಡಲಾಗಿದೆ ಎಂದು ಚನ್ನಿ ಹೇಳಿದ್ದಾರೆ.

ಕಳೆದ ವರ್ಷ ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಅವರು ಬಸ್ಸಿ ಪಠಾನಾದಲ್ಲಿ ಗುರ್‌ಪ್ರೀತ್‌ ಸಿಂಗ್‌ ಅವರ ಕಚೇರಿಯನ್ನು ಉದ್ಘಾಟಿಸಿದ್ದರು. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರುವರಿ 14ರಂದು ಚುನಾವಣೆ ನಿಗದಿಯಾಗಿದ್ದು, ಮಾರ್ಚ್‌ 10ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.