ADVERTISEMENT

ಎಸಿ ಇಲ್ಲದೆ ಬೆವೆತ ಪ್ರಯಾಣಿಕರು; ಇಂಡಿಗೊ ವಿಮಾನದ ಕಹಿ ಅನುಭವ ಹೇಳಿದ ‘ಕೈ’ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2023, 10:56 IST
Last Updated 6 ಆಗಸ್ಟ್ 2023, 10:56 IST
ಪ್ರಯಾಣಿಕರಿಗೆ ಟಿಶ್ಯೂ ಪೇಪರ್‌ ಹಂಚುತ್ತಿರುವ ಗಗನಸಖಿ (Twitter/@RajaBrar_INC)
ಪ್ರಯಾಣಿಕರಿಗೆ ಟಿಶ್ಯೂ ಪೇಪರ್‌ ಹಂಚುತ್ತಿರುವ ಗಗನಸಖಿ (Twitter/@RajaBrar_INC)   

ಚಂಡಿಗಢ: ವಿಮಾನ ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿರುವ ಪಂಜಾಬ್ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌, ಇಂಡಿಗೊ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮರಿಂದರ್‌ ಸಿಂಗ್‌, ಅಸಮರ್ಪಕ ನಿರ್ವಹಣೆಗಾಗಿ ಇಂಡಿಗೊ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್‌ ಜೊತೆಗೆ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

'ಇಂದು ಇಂಡಿಗೊದ 6E7261 ವಿಮಾನದಲ್ಲಿ ಚಂಡಿಗಢದಿಂದ ಜೈಪುರಕ್ಕೆ ಪ್ರಯಾಣ ಮಾಡಿದ್ದೇನೆ. ಇದೊಂದು ಭೀಕರ ಅನುಭವ ಎಂದು ಹೇಳಬಹುದು. ಮೊದಲಿಗೆ ಸುಡುವ ಬಿಸಿಲಿನಲ್ಲಿ 10ರಿಂದ 15 ನಿಮಿಷ ನಿಲ್ಲಿಸಿದರು. ವಿಮಾನದ ಹವಾ ನಿಯಂತ್ರಣ(ಎಸಿ) ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ವಿಮಾನದೊಳಗೆ ಪ್ರಯಾಣಿಕರೆಲ್ಲ ಬೆವೆತು ಹೋದರು. ಇಷ್ಟಾದರೂ ಯಾರು ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

'ಎಸಿ ಇಲ್ಲದೇ ಪ್ರಯಾಣಿಕರು ಕುಳಿತಲ್ಲಿಯೇ ಬೆವರುತ್ತಿದ್ದರು. ಏನೂ ನಡೆದಿಲ್ಲ ಎಂಬಂತೆ ಗಗನಸಖಿಯರು ಬೆವರನ್ನು ಒರೆಸಿಕೊಳ್ಳುವಂತೆ ಟಿಶ್ಯೂ ಪೇಪರ್‌ ಹಂಚುತ್ತಿದ್ದರು. ಮಕ್ಕಳು ಮತ್ತು ಮಹಿಳೆಯರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದರು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಖಂಡಿತ. ಅದೊಂದು ಸಮಸ್ಯೆಯೆಂದು ಯಾರಿಗೂ ಅನ್ನಿಸುತ್ತಿಲ್ಲ ಅಷ್ಟೇ. ಇಷ್ಟೆಲ್ಲ ಸಮಸ್ಯೆಯಾದರೂ ಸಂಸ್ಥೆಯ ಅಧಿಕಾರಿಗಳು ಪ್ರಯಾಣ ದರ ಕಡಿತಗೊಳಿಸುವುದಾಗಿ ‌ಹೇಳುತ್ತಾರೆ. ದರ ಕಡಿತಗೊಳಿಸಲು ಪ್ರಯಾಣಿಕರು ತಮ್ಮ ಜೀವವನ್ನೇ ಪಣಕ್ಕಿಡಬೇಕಾಯಿತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಲ್ಲಿಯೂ ಇಂಡಿಗೊದ ಅಸಮರ್ಪಕ ನಿರ್ವಹಣೆ ಬಗ್ಗೆ ದೂರು ಕೇಳಿಬಂದಿತ್ತು. ಅಸಮರ್ಪಕ ಹವಾ ನಿಯಂತ್ರಣ ವ್ಯವಸ್ಥೆಯಿಂದ ದೆಹಲಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆಗ ಉಸಿರಾಟದ ತೊಂದರೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.