ನವದೆಹಲಿ: ಲುಧಿಯಾನದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಒಂದು ದಿನದ ಬಳಿಕ ಉಗ್ರಗಾಮಿ ಸಂಘಟನೆ ಲಷ್ಕರ್–ಎ–ತೈಯಬಾ ಸಂಭವನೀಯ ದಾಳಿ ಬಗ್ಗೆ ಪಂಜಾಬ್ ರಾಜ್ಯದ ಆಂತರಿಕ ಭದ್ರತೆಯ ಡಿಐಜಿ, ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳಿಗೆ ಬರೆದಿರುವ ಪತ್ರ ಇದೀಗ ಲಭ್ಯವಾಗಿದೆ.
‘ರಕ್ಷಣಾ ಇಲಾಖೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ, ಪೊಲೀಸ್ ಇಲಾಖೆಯ ಕಟ್ಟಡಗಳು ಮತ್ತು ನ್ಯಾಯಾಲಯದಲ್ಲಿ ಸಂಭವನೀಯ ಉಗ್ರರ ದಾಳಿ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ನವೆಂಬರ್ 30ರಂದೇ ಡಿಐಜಿ, ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆ ರವಾನಿಸಿದ್ದಾರೆ.
‘ಕೇಂದ್ರೀಯ ತನಿಖಾ ಸಂಸ್ಥೆ ಹಂಚಿಕೊಂಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಪಾಕಿಸ್ತಾನದ ಶಂಕರ್‌ಗಡದಲ್ಲಿ ಐವರು ಉಗ್ರರಿಗೆ ತರಬೇತಿ ಕೊಟ್ಟು, ಕರ್ತಾರ್‌ಪುರ್ ಮೂಲಕ ಭಾರತಕ್ಕೆ ನುಸುಳುವಂತೆ ಲಷ್ಕರ್–ಎ–ತೈಯಬಾಗೆ ಐಎಸ್ಐ ಸೂಚಿಸಿದೆ. ಬಳಿಕ, ಪಠಾಣ್ ಕೋಟ್ ಅಥವಾ ಗುರುದಾಸ್‌ಪುರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸೂಚಿಸಲಾಗಿದೆ’ಎಂದು ತಿಳಿದು ಬಂದಿದೆ ಎಂದೂ ತಿಳಿಸಲಾಗಿದೆ.
ಪತ್ರದಲ್ಲಿ ಇಬ್ಬರು ಮೂಲಭೂತವಾದಿಗಳಾದ ಮೊಹಮ್ಮದ್ ಗುಲ್ಜಾರ್ ಮಘ್ರೆ ಮತ್ತು ಶಹಜಾದ್ ಬಂದೆ ಹೆಸರನ್ನು ಬಹಿರಂಗಪಡಿಸಲಾಗಿದೆ. ಜಮ್ಮು ಮತ್ತ ಕಾಶ್ಮೀರದ ಭದ್ರತಾ ಪಡೆಗಳ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಇಸ್ಲಾಂ ಉಗ್ರಗಾಮಿ ಸಂಘಟನೆ ಮುಸ್ಲಿಂ ಜನಬಾಜ್ ಪಡೆಗೆ ಸೂಚಿಸಿರುವುದನ್ನು ತಿಳಿಸಲಾಗಿದೆ.
ಕೂಡಲೇ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇಡುವ ಮೂಲಕ ಸಂಭಾವ್ಯ ದಾಳಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಖೆಗೆ ಡಿಐಜಿ ಸೂಚಿಸಿದ್ದರು ಎಂಬುದು ಪತ್ರದಲ್ಲಿ ಬಯಲಾಗಿದೆ.
ಬಿಎಸ್‌ಎಫ್‌ನೊಂದಿಗೆ ಸಮನ್ವಯದೊಂದಿಗೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಎರಡನೇ ಸಾಲಿನ ರಕ್ಷಣಾ ರೇಖೆಯನ್ನು ಪರಿಶೀಲಿಸಲು ಏಜೆನ್ಸಿಗಳಿಗೆ ಕೇಳಲಾಗಿತ್ತು. ಮಾರ್ಗಗಳು, ಅಂತರರಾಷ್ಟ್ರೀಯ ಗಡಿಯಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ತಿ:ಳಿಸಲಾಗಿತ್ತು. ಪಾಕಿಸ್ತಾನದಿಂದ ಸಂಭವನೀಯ ಒಳನುಸುಳುವಿಕೆ ಬಗ್ಗೆ ಪತ್ರದಲ್ಲಿ ತಿಳಿಸಲಾಗಿತ್ತು.
ನಿನ್ನೆ ಲುಧಿಯಾನಕೋರ್ಟ್‌ನಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.