ADVERTISEMENT

Punjab Election Results 2022 | ಪಂಜಾಬ್‌ನಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 16:14 IST
Last Updated 10 ಮಾರ್ಚ್ 2022, 16:14 IST
ಕಾಂಗ್ರೆಸ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌
ಕಾಂಗ್ರೆಸ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌   

ಕಳೆದ ಚುನಾವಣೆಯಲ್ಲಿ 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ, ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ವ್ಯಕ್ತಪಡಿಸಿವೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ಎದುರಾಗಿದೆ.

ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...

ಯಾರು ಲಾಬ್‌ ಸಿಂಗ್‌ ಉಕೋಕ್‌:ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಬದೌರ್ ಕ್ಷೇತ್ರದಲ್ಲಿ ಮಣಿಸಿದ್ದು ಲಾಬ್‌ ಸಿಂಗ್ ಉಗೋಕೆ. ಇವರು 2013ರಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದರು. ಉಗೋಕೆಯವರ ತಂದೆ ವೃತ್ತಿಯಿಂದ ಚಾಲಕ. ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ನಿರ್ಹಹಿಸುತ್ತಿದ್ದಾರೆ. ಉಗೋಕೆ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದು, ಪಿಯುಸಿ ಪಾಸಾಗಿದ್ದಾರೆ. ‘ನನಗೆ, ಬದೌರ್ ಕ್ಷೇತ್ರ ಮಾತ್ರವೇ ಅಲ್ಲ. ಇದು ನನ್ನ ಕುಟುಂಬ. ಚನ್ನಿ ಸಾಹೇಬ್‌ಗೆ ಬದೌರ್‌ನ 10 ಹಳ್ಳಿಗಳ ಹೆಸರೂ ತಿಳಿದಿಲ್ಲ. ಚನ್ನಿ ಸಾಹಬ್‌ಗೆ ಬದೌರ್ ಎಂದರೆ ಕ್ಷೇತ್ರ ಮಾತ್ರ’ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ADVERTISEMENT

ಚರಣ್‌ಜಿತ್‌ ಸಿಂಗ್‌ ಬಗ್ಗೆ:ಚಮಕೌರ್ ಕ್ಷೇತ್ರದಲ್ಲಿ ಚನ್ನಿ ಅವರನ್ನು ಸೋಲಿಸಿದ್ದು ಡಾ. ಚರಣ್‌ಜಿತ್‌ ಸಿಂಗ್‌. ವೃತ್ತಿಯಲ್ಲಿ ನೇತ್ರ ತಜ್ಞರಾಗಿರುವ ಚರಣ್‌ಜಿತ್‌ ಸಿಂಗ್‌, ಸಮಾಜ ಸೇವಕರೂ ಹೌದು. ಸದ್ಯ ಅವರು ಪಂಜಾಬ್‌ನ ಎಎಪಿ ಘಟಕದ ವೈದ್ಯರ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.

ಕೇಜ್ರಿವಾಲ್‌ ಭಯೋತ್ಪಾದಕನಲ್ಲ

‘ಕೇಜ್ರಿವಾಲ್ ಭಯೋತ್ಪಾದಕನಲ್ಲ. ಆತ ದೇಶದ ಮಗ, ನಿಜವಾದ ದೇಶಭಕ್ತ ಎಂಬುದಾಗಿ ಜನರು ಸ್ಪಷ್ಟಪಡಿಸಿದ್ದಾರೆ’ ಎಂದು ಆಮ್‌ ಆದ್ಮಿ ವರಿಷ್ಠ ಕೇಜ್ರಿವಾಲ್‌ ಹೇಳಿದ್ದಾರೆ. ಪಂಜಾಬ್‌ ಜಯದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಬದಲಾವಣೆಯ ಸಮಯ. ಇದೊಂದು ಕ್ರಾಂತಿ ಎಂದು ಬಣ್ಣಿಸಿದ್ದಾರೆ.

ಭಗತ್‌ ಸಿಂಗ್‌ ಹುಟ್ಟೂರಲ್ಲಿ ಪ್ರಮಾಣವಚನ

ಪಂಜಾಬ್ ಮುಖ್ಯಮಂತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರು ಖಟ್‌ಕಡ್‌ಕಲಾಂನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ, ರಾಜಭವನದಲ್ಲಿ ಅಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್ ಹೇಳಿದ್ದಾರೆ.

ಹಾಲಿ ಮಾಜಿ ಸಿಎಂಗಳಿಗೆ ಸೋಲುಣಿಸಿದಿ ಎಎಪಿ

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರಮ್ಯ ಮರೆದಿದ್ದು, ಪಕ್ಷದ ಅಭ್ಯರ್ಥಿಗಳು ಹಾಲಿ, ಮಾಜಿ ಮುಖ್ಯಮಂತ್ರಿಗಳನ್ನು ಸೋಲಿಸಿದ್ದಾರೆ. ಮುಖ್ಯಮಂತ್ರಿ ಚರಂಣ್‌ಜಿತ್‌ ಸಿಂಗ್ ಚನ್ನಿ, ಮಾಜಿ ಸಿಎಂಗಳಾದ ಪ್ರಕಾಶ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್‌ ಎಎಪಿ ಎದುರು ಸೋಲುಂಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಧು, ಮಾಜಿ ಡಿಸಿಎಂ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರನ್ನೂ ಎಎಪಿ ಅಭ್ಯರ್ಥಿಗಳು ಸೋಲಿಸಿದ್ದಾರೆ.

ಚನ್ನಿಗೆಹಿನ್ನಡೆ

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್‌ ಸಿಂಗ್‌ ಸಿಧು ಸಹ ಹಿನ್ನೆಡೆಯಲ್ಲಿದ್ದಾರೆ. ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್‌ ಸಂಖ್ಯೆ 59ಕ್ಕೆ ಎಎಪಿ ಸಮೀಪದಲ್ಲಿದೆ. ಈಗಾಗಲೇ ಎಎಪಿ 54 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಎಎಪಿಯ ಅಜಿತ್‌ ಪಾಲ್‌ ಕೊಹ್ಲಿ ಎದುರು ಹಿನ್ನಡೆ ಅನುಭವಿಸಿದ್ದಾರೆ.

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಅವರು ಬೆಳಿಗ್ಗೆ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರ ನಿವಾಸದಲ್ಲಿ ಹೂವಿನ ಅಲಂಕರ ಮಾಡಲಾಗಿದೆ ಹಾಗೂ ಸಿಹಿ ತಿನಿಸು ಜಿಲೇಬಿ ತಯಾರಿಸಲಾಗುತ್ತಿದೆ.

ಪಂಜಾಬ್‌ನ 2017ರ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಪಕ್ಷವು, ಈ ಬಾರಿ ಚುನಾವಣೆಯಲ್ಲಿ 19–33 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಪ್ರಕಟಿಸಿವೆ. ಕಳೆದ ಬಾರಿ ಕೇವಲ 3 ಸ್ಥಾನಗಳಲ್ಲಿ ನಗೆ ಬೀರಿದ್ದ ಬಿಜೆಪಿಯು ಈ ಬಾರಿಯೂ ಹಿಂದುಳಿಯಲಿದ್ದು, ಆಮ್‌ ಆದ್ಮಿ ಪಕ್ಷ (ಎಎಪಿ) ಅತಿ ಹೆಚ್ಚು ಸ್ಥಾನಗಳನ್ನು (56–100) ಪಡೆಯುವುದಾಗಿ ಪ್ರಕಟಿಸಿವೆ.

ಎಎಪಿ ಸ್ಥಾನಗಳಿಸುವುದರಲ್ಲಿ ಎಡವಿದರೆ, ಸರ್ಕಾರ ರಚನೆಯಲ್ಲಿ ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಪ್ರಮುಖ ಪಾತ್ರವಹಿಸುವ ಸಾಧ್ಯತೆಯನ್ನು ಬಹುತೇಕ ಸಮೀಕ್ಷೆಗಳು ತೆರೆದಿಟ್ಟಿವೆ.

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಅವರ ಪರವಾಗಿ ಶೇಕಡ 37ರಷ್ಟು ಮತದಾರರು ಒಲವು ತೋರಿದ್ದರೆ, ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಶೇಕಡ 27ರಷ್ಟು ಮತದಾರರ ಬೆಂಬಲ ಸಿಕ್ಕಿದೆ. ಶೇಕಡ 19ರಷ್ಟು ಮತದಾರರು ಸುಖ್ಬಿರ್‌ ಸಿಂಗ್‌ ಬಾದಲ್‌ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಉತ್ತಮ ಎಂದಿದ್ದಾರೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಭಗವಂತ್‌ ಮಾನ್ ಮುಖ್ಯಮಂತ್ರಿಯಾಗುವ ಬಗ್ಗೆ ಮತದಾರರ ಒಲವಿದೆ.

ಪಂಜಾಬ್‌: 2017ರ ವಿಧಾನಸಭಾ ಚುನಾವಣೆ ಫಲಿತಾಂಶ

ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌– 77
ಎಎಪಿ– 20
ಲೋಕ ಇನ್‌ಸಾಫ್‌ ಪಾರ್ಟಿ– 02
ಶಿರೋಮಣಿ ಅಕಾಲಿ ದಳ (ಎಸ್‌ಎಡಿ)– 15
ಬಿಜೆಪಿ– 3

ಪಂಜಾಬ್‌: 2022ರ ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ

ಇಂಡಿಯಾ ಟುಡೆ

ಬಿಜೆಪಿ: 1–4
ಕಾಂಗ್ರೆಸ್‌: 19–31
ಎಎಪಿ: 76–90
ಎಸ್‌ಎಡಿ: 7–11

***
ಟುಡೇಸ್‌ ಚಾಣಕ್ಯ

ಬಿಜೆಪಿ: 01
ಕಾಂಗ್ರೆಸ್‌: 10
ಎಎಪಿ: 100
ಎಸ್‌ಎಡಿ: 6

****
ಸಿ–ವೋಟರ್‌

ಬಿಜೆಪಿ: 7–13
ಕಾಂಗ್ರೆಸ್‌: 22–28
ಎಎಪಿ: 51–61
ಎಸ್‌ಎಡಿ: 20–26

***

ಇಟಿಜಿ ರಿಸರ್ಚ್‌

ಬಿಜೆಪಿ: 3–7
ಕಾಂಗ್ರೆಸ್‌: 27–33
ಎಎಪಿ: 70–75
ಎಸ್‌ಎಡಿ: 7–13

***
ನ್ಯೂಸ್‌ಎಕ್ಸ್‌–ಪೋಲ್‌ಸ್ಟರ್‌

ಬಿಜೆಪಿ: 1–6
ಕಾಂಗ್ರೆಸ್‌: 24–29
ಎಎಪಿ: 56–61
ಎಸ್‌ಎಡಿ: 22–26

***
ರಿಪಬ್ಲಿಕ್‌ ಟಿ.ವಿ

ಬಿಜೆಪಿ 1–3
ಕಾಂಗ್ರೆಸ್‌: 23–31
ಎಎಪಿ: 62–70
ಎಸ್‌ಎಡಿ: 16–24

***

ಟಿವಿ9–ಭಾರತವರ್ಷ–ಪೋಲ್‌ಸ್ಟರ್‌

ಬಿಜೆಪಿ: 1–6
ಕಾಂಗ್ರೆಸ್‌: 24–29
ಎಎಪಿ: 56–61
ಎಸ್‌ಎಡಿ: 22–26

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.