ನವದೆಹಲಿ:ಪಂಜಾಬ್ ಪಟಿಯಾಲ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಘರ್ಷಣೆಗಳ ಪ್ರಕರಣದಲ್ಲಿನ ಪ್ರಮುಖ ಸಂಚುಕೋರ ಸೇರಿ ಆರು ಮಂದಿಯನ್ನು ಭಾನುವಾರ ಬಂಧಿಸಲಾಗಿದೆ. ದಮದಮಿ ಟಕ್ಸಾಲ್ ಜಥ್ತಾ ರಾಜಪುರಾ ಸಿಖ್ ಗುಂಪಿನ ಮುಖಂಡ ಬರಜಿಂದರ್ ಸಿಂಗ್ ಪರ್ವಾನ್ ಬಂಧಿತ ಆರೋಪಿ.
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಉಗ್ರ ನಿಗ್ರರ ಕಾನೂನು ಹಾಗೂ 1984ರ ದಂಗೆ ಕುರಿತ ಹೇಳಿಕೆಗಳಿಂದ ಬರಜಿಂದರ್ ಸಿಂಗ್ ಪರ್ವಾನ್ ಈ ಹಿಂದೆ ಚರ್ಚೆಗೆ ಗ್ರಾಸವಾಗಿದ್ದರು. 'ಪರ್ವಾನ್ ಸ್ವಯಂ ಘೋಷಿತ ಸಿಖ್ ಮುಖಂಡನಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ಪಡೆಯಲು ಅಸಂಬದ್ಧ ಭಾಷಣಗಳನ್ನು ಮಾಡಿದ್ದಾರೆ' ಎಂದು ಪೊಲೀಸ್ ಐಜಿ ಮುಖ್ವಿಂದರ್ ಸಿಂಗ್ ಚಿನ್ನ ಹೇಳಿದ್ದಾರೆ.
ಹಿಂಸಾಚಾರದ ಸಂಬಂಧ ಶನಿವಾರದವರೆಗೂ ಶಿವಸೇನಾ ಮುಖಂಡ ಹರೀಶ್ ಸಿಂಗ್ಲಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರಿಂದ ಪ್ರಭಾವಿತನಾಗಿರುವುದಾಗಿ ಹೇಳಿಕೊಳ್ಳುವ ಹರೀಶ್, ಪಂಜಾಬ್‌ನಲ್ಲಿ ಖಲಿಸ್ತಾನ್ ವಿರೋಧಿ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಾರೆ. ಹಿಂಸಾಚಾರದಲ್ಲಿ ಆತ ಪ್ರಮುಖ ಪಾತ್ರವಹಿಸಿರುವುದಾಗಿ ಶಂಕಿಸಲಾಗಿದೆ.
ಶುಕ್ರವಾರ ಕಾಳಿ ದೇವಿ ದೇವಸ್ಥಾನದ ಕಡೆಗೆ 'ಖಲಿಸ್ತಾನ್ ವಿರೋಧಿ ಯಾತ್ರೆ' ಮೆರವಣಿಗೆ ಸಾಗುವಾಗ ಘರ್ಷಣೆ ಸಂಭವಿಸಿತ್ತು. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕಲ್ಲು ಮತ್ತು ಖಡ್ಗಗಳನ್ನು ಬಳಸಲಾಗಿತ್ತು, ಹಲವು ಮಂದಿ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಘರ್ಷಣೆ ಬೆನ್ನಲ್ಲೇ ಕರ್ಫ್ಯೂ ಜಾರಿ ಮಾಡಿ ಕಠಿಣ ಭದ್ರತೆ ನಿಯೋಜಿಸಲಾಗಿತ್ತು. ಶನಿವಾರ ಕೆಲವು ಗಂಟೆ ಮೊಬೈಲ್ ಇಂಟರ್‌ನೆಟ್ ಕಾರ್ಯಾಚರಣೆ ನಿರ್ಬಂಧಿಸಲಾಗಿತ್ತು. ಹಿಂಸಾಚಾರದ ಸಂಬಂಧ ಪೊಲೀಸರು ಆರು ಎಫ್ಐಆರ್ ದಾಖಲಿಸಿದ್ದು, 25 ಜನರನ್ನು ಹೆಸರಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಅಧಿಕಾರ ವಹಿಸಿದ ನಂತರದಲ್ಲಿ ನಡೆದಿರುವ ಪ್ರಮುಖ ಹಿಂಸಾಚಾರ ಘಟನೆ ಇದಾಗಿದೆ. ಘಟನೆಯ ಸಂಬಂಧ ವಿರೋಧ ಪಕ್ಷಗಳು ಆಡಳಿತಾರೂಢ ಎಎಪಿ ಸರ್ಕಾರವನ್ನು ಟೀಕೆಗೆ ಒಳಪಡಿಸಿವೆ. ಮಾನ್ ಅವರ ಆದೇಶದ ಮೇರೆಗೆ ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.