ನವದೆಹಲಿ: ಪಂಜಾಬ್‌ನ ಪಟಿಯಾಲದಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 71 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್–19 ದೃಢಪಟ್ಟಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿವೆ ಹಾಗೂ ಅವರು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ವಿಶ್ವವಿದ್ಯಾಲಯದ ಒಟ್ಟು 86 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಪಂಜಾಬ್ ಆರೋಗ್ಯ ಇಲಾಖೆಯು ಅಲ್ಲಿನ ಆವರಣವನ್ನು ಕೋವಿಡ್ ಹಾಟ್‌ಸ್ಪಾಟ್ ಆಗಿ ಪರಿಗಣಿಸಿದೆ.
ದೇಶದಾದ್ಯಂತ ಗುರುವಾರ ಬೆಳಗ್ಗಿನವರೆಗೂ 24 ಗಂಟೆಗಳ ಅಂತರದಲ್ಲಿ ಕೋವಿಡ್ ದೃಢಪಟ್ಟ 3,275 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನ ಕಾರಣಗಳಿಂದ 55 ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ದೇಶದಾದ್ಯಂತ 3,205 ಪ್ರಕರಣಗಳು ವರದಿಯಾಗಿದ್ದವು.
ಪಟಿಯಾಲದ ವಿಶ್ವವಿದ್ಯಾಲಯದಲ್ಲಿ 550 ಮಾದರಿಗಳನ್ನು ಸಂಗ್ರಹಿಸಿ, ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುವುದು ಮತ್ತು ಹೊರ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೋವಿಡ್ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಮಾರ್ಚ್‌ನಲ್ಲಿ ಪಂಜಾಬ್ ಸರ್ಕಾರವು ಕೋವಿಡ್–19 ನಿರ್ಬಂಧಗಳನ್ನು ತೆಗೆದುಹಾಕಿತ್ತು.
ಪ್ರಸ್ತುತ ದೇಶದಲ್ಲಿ 19,719 ಸಕ್ರಿಯ ಪ್ರಕರಣಗಳಿವೆ. ಗುಣಮುಖ ಪ್ರಮಾಣ ಶೇಕಡ 98.74ರಷ್ಟಿದೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,30,91,393 ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.