ADVERTISEMENT

ರೈತ ಶುಭಕರನ್ ಸಾವು: ಪಂಜಾಬ್ ಪೊಲೀಸರಿಂದ ಕೊಲೆ ಪ್ರಕರಣ ದಾಖಲು

ಪಿಟಿಐ
Published 29 ಫೆಬ್ರುವರಿ 2024, 3:03 IST
Last Updated 29 ಫೆಬ್ರುವರಿ 2024, 3:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಂಡೀಗಢ: ಹರಿಯಾಣದ ಖನೌರಿ ಗಡಿ ಬಳಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವಿನ ಘರ್ಷಣೆಯ ಸಂದರ್ಭ ಸಂಭವಿಸಿದ್ದ ರೈತನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದರು. ದೆಹಲಿಗೆ ಹೊಂದಿಕೊಂಡಿರುವ ಹರಿಯಾಣ, ಪಂಜಾಬ್ ಗಡಿಗಳಲ್ಲೇ ರೈತರನ್ನು ಪೊಲೀಸರು ತಡೆದಿದ್ದರಿಂದ ಸಂಘರ್ಷ ಭುಗಿಲೆದ್ದಿತ್ತು. ಈ ಸಂದರ್ಭ ರೈತನೊಬ್ಬ ಅಸುನೀಗಿದ್ದ. ರೈತ ಮೃತಪಟ್ಟು 7 ದಿನಗಳ ಬಳಿಕ ರೈತರ ಒತ್ತಾಯಕ್ಕೆ ಮಣಿದಿರುವ ಪಂಜಾಬ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. 21 ವರ್ಷದ ಶುಭಕರನ್, ಬಟಿಂಡಾ ನಿವಾಸಿಯಾಗಿದ್ದರು.

ADVERTISEMENT

ಫೆಬ್ರುವರಿ 21ರಂದು ಪಂಜಾಬ್–ಹರಿಯಾಣ ಗಡಿ ಖನೌರಿಯಲ್ಲಿ ಸಂಭವಿಸಿದ ಪೊಲೀಸ್ ಮತ್ತು ರೈತರ ನಡುವಿನ ಘರ್ಷಣೆಯಲ್ಲಿ ಶುಭಕರನ್ ಮೃತಪಟ್ಟರೆ, 12 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ಐಪಿಸಿ ಸೆಕ್ಷನ್ 302(ಕೊಲೆ) ಮತ್ತು 114ರ ಅಡಿ ಪಟಿಯಾಲದ ಪತ್ರನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಭಕರನ್ ತಂದೆ ನೀಡಿದ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ರೈತ ಮೃತಪಟ್ಟ ಬಳಿಕ ಕೆಲ ದಿನಗಳಿಂದ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.

ಈ ಮಧ್ಯೆ, ಮೃತ ರೈತ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ ₹1 ಕೋಟಿ ಆರ್ಥಿಕ ನೆರವು ಹಾಗೂ ಅವರ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.