ADVERTISEMENT

ಎಂಥ ಅದ್ಭುತ ಫೋಟೊ...: ಭಗವಂತ ಮಾನ್‌ರನ್ನು ಅಭಿನಂದಿಸಿದ ಹರ್ಭಜನ್‌ ಸಿಂಗ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2022, 6:44 IST
Last Updated 12 ಮಾರ್ಚ್ 2022, 6:44 IST
ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ   

ಅಮೃತಸರ: ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಭಗವಂತ ಮಾನ್ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಮಾನ್ ಅವರು ತನ್ನ ತಾಯಿಯನ್ನು ತಬ್ಬಿಕೊಂಡಿರುವ ಹೃದಯಸ್ಪರ್ಶಿ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಹರ್ಭಜನ್, ‘ನಮ್ಮ ರಾಜ್ಯದ ನೂತನ ಮುಖ್ಯಮಂತ್ರಿಯಾಗುತ್ತಿರುವ ಎಎಪಿ ಪಕ್ಷದ ನನ್ನ ಸ್ನೇಹಿತ ಭಗವಂತ ಮಾನ್ ಅವರಿಗೆ ಅಭಿನಂದನೆಗಳು. ಭಗತ್ ಸಿಂಗ್ ಅವರ ಗ್ರಾಮ ಖಟ್‌ಕಡ್‌ಕಲಾಂನಲ್ಲಿ ಮಾನ್‌ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹೇಳುವುದಕ್ಕೆ ಸಂತಸವಾಗುತ್ತಿದೆ. ಎಂಥ ಅದ್ಭುತ ಚಿತ್ರ... ಇದು ಮಾತಾ ಜೀಗೆ ಹೆಮ್ಮೆಯ ಕ್ಷಣವಾಗಿದೆ...’ ಎಂದು ಬರೆದುಕೊಂಡಿದ್ದಾರೆ.

‌ಭಗವಂತ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದುಪ್ರಮಾಣವಚನ ಸ್ವೀಕರಿಸಲಿದ್ದಾರೆ.

ADVERTISEMENT

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಭಗವಂತ ಮಾನ್‌ ಅವರು ಅರವಿಂದ ಕೇಜ್ರಿವಾಲ್ ಅವರೊಂದಿಗೆ ಮಾ.13ರಂದು (ಭಾನುವಾರ) ಅಮೃತಸರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಕೇವಲ 18 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಬಿಜೆಪಿ ಎರಡು ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮೂರು ಕ್ಷೇತ್ರಗಳಲ್ಲಿ ಜಯ ಕಂಡಿವೆ. ಬಹುಜನ ಸಮಾಜವಾದಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಒಂದೊಂದು ಕಡೆ ಗೆಲುವು ಸಾಧಿಸಿದ್ದಾರೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್‌ 77 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಎಸ್‌ಎಡಿ 17, ಬಿಜೆಪಿ 3 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆದ್ದಿದ್ದರು. 20 ಕಡೆ ಗೆಲುವಿನ ಖಾತೆ ತೆರೆದಿದ್ದ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದ ಭಗವಂತ ಮಾನ್, ‘ಎಎಪಿ ಪಕ್ಷದ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಬದಲಾವಣೆ ಮತ್ತು ಪ್ರಾಮಾಣಿಕ ರಾಜಕೀಯದ ಪರವಾಗಿ ತೀರ್ಪು ನೀಡಿದ ಪಂಜಾಬಿನ ಜನತೆಗೆ ಧನ್ಯವಾದಗಳು’ ಎಂದು ಹೇಳಿದ್ದರು.

ಹರ್ಭಜನ್ ಸಿಂಗ್‌, ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 23 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.