ಚಂಡೀಗಢ: ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಸಂಗ್ರೂರ್ ಜಿಲ್ಲೆಯ ಧುರೀ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಕುರಿತು ಮೊಹಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಮಾಹಿತಿ ನೀಡಿದ್ದಾರೆ.
ಜ.18ರಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಮಾನ್ ಅವರು ಶೇ 93ರಷ್ಟು ಮತಗಳನ್ನು ಪಡೆದಿದ್ದರು.
48 ವರ್ಷ ವಯಸ್ಸಿನ ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದ ಎಎಪಿ ಸಂಸದರಾಗಿದ್ದಾರೆ. ಪಂಜಾಬ್ ವಿವಿಯಿಂದ ಸ್ನಾತಕೋತ್ತರ ಪದವೀಧರರಾಗಿರುವ ಅವರು ಕಳೆದ 10 ವರ್ಷದಿಂದ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಧುರೀ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ದಲ್ವೀರ್ ಸಿಂಗ್ ಗೋಲ್ಡಿ ಪ್ರತಿನಿಧಿಸುತ್ತಿದ್ದಾರೆ.
ಫೆಬ್ರುವರಿಯಲ್ಲಿ ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.