ADVERTISEMENT

Punjab Results: ಪಂಜಾಬ್‌ ಸೋಲಿಗೆ ಅಮರಿಂದರ್‌ರನ್ನು ಹೊಣೆ ಮಾಡಿದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 11:43 IST
Last Updated 10 ಮಾರ್ಚ್ 2022, 11:43 IST
ರಣದೀಪ್ ಸಿಂಗ್ ಸುರ್ಜೇವಾಲ – ಪಿಟಿಐ ಚಿತ್ರ
ರಣದೀಪ್ ಸಿಂಗ್ ಸುರ್ಜೇವಾಲ – ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾರಣ ಎಂದು ಪಕ್ಷದ ನಾಯಕರು ದೂರಿದ್ದಾರೆ.

ಪಂಜಾಬ್‌ನಲ್ಲಿ ಹೊಸ ನಾಯಕನ ನೇತೃತ್ವದಲ್ಲಿ ಹೆಜ್ಜೆ ಇಟ್ಟಿದ್ದೆವು. ಮಣ್ಣಿನ ಮಗ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೆವು. ಆದರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನಾಲ್ಕೂವರೆ ವರ್ಷಗಳ ಆಡಳಿತದ ವಿರುದ್ಧ ಸೃಷ್ಟಿಯಾದ ಅಲೆಯನ್ನು ಮೆಟ್ಟಿ ನಿಲ್ಲುವುದು ಸಾಧ್ಯವಾಗಲಿಲ್ಲ. ಹೀಗಾಗಿ ಜನ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಮತ ಚಲಾಯಿಸಿದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೂ ಕೆಲವೇ ತಿಂಗಳುಗಳ ಮೊದಲು ಪಂಜಾಬ್ ಕಾಂಗ್ರೆಸ್‌ನಲ್ಲಿ ಭಿನ್ನಮತ, ಆಂತರಿಕ ಕಲಹ ಉಂಟಾಗಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಅಮರಿಂದರ್ ಸಿಂಗ್ ನಡುವಣ ಕಲಹ ತಾರಕಕ್ಕೇರಿತ್ತು. ಬಳಿಕ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆರವುಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡ ಅಮರಿಂದರ್ ಸಿಂಗ್ ಕಾಂಗ್ರೆಸ್‌ ತ್ಯಜಿಸಿ ‘ಪಂಜಾಬ್ ಲೋಕ್ ಕಾಂಗ್ರೆಸ್’ ಎಂಬ ಹೊಸ ಪಕ್ಷ ಸ್ಥಾಪಿಸಿದ್ದರು. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರು.

ಬಳಿಕ ನೂತನ ಮುಖ್ಯಮಂತ್ರಿ ಚನ್ನಿ ಹಾಗೂ ಸಿಧು ನಡುವೆಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ಹೈಕಮಾಂಡ್ ಮಧ್ಯ ಪ್ರವೇಶಿಸಿ ಸಿಧು ಅವರ ಅಸಮಾಧಾನವನ್ನು ತಣ್ಣಗಾಗಿಸಿತ್ತು.

ಕಾಂಗ್ರೆಸ್‌ನಿಂದ ಆತ್ಮಾವಲೋಕನ

ವಿಧಾನಸಭೆ ಚುನಾವಣೆಯಲ್ಲಿ ಎದುರಾಗಿರುವ ಸೋಲಿನ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಕಾರ್ಯಕಾರಿ ಸಮಿತಿ ಸಭೆಯನ್ನು ಶೀಘ್ರದಲ್ಲೇ ಕರೆಯಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದೂ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.