ADVERTISEMENT

ಜುಲೈ 1ರಿಂದ ಮೂರು ನೂತನ ಅಪರಾಧ ಕಾನೂನು ಜಾರಿ: ತಡೆಹಿಡಿಯಲು ಸ್ಟಾಲಿನ್ ಆಗ್ರಹ

ಪಿಟಿಐ
Published 18 ಜೂನ್ 2024, 16:27 IST
Last Updated 18 ಜೂನ್ 2024, 16:27 IST
<div class="paragraphs"><p>ಎಂ.ಕೆ. ಸ್ಟಾಲಿನ್</p></div>

ಎಂ.ಕೆ. ಸ್ಟಾಲಿನ್

   

ಚೆನ್ನೈ: ‘ಬರುವ ಜುಲೈ 1ರಿಂದ ಜಾರಿಗೆ ಬರಲಿರುವ ನೂತನ ಅಪರಾಧ ಕಾನೂನುಗಳ ಕುರಿತು ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಅಲ್ಲಿಯವರೆಗೂ ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೇಂದ್ರವನ್ನು ಆಗ್ರಹಿಸಿದ್ದಾರೆ.

ಸದ್ಯ ಜಾರಿಯಲ್ಲಿರುವ ಇಂಡಿಯನ್ ಪಿನಲ್ ಕೋಡ್‌ 1860, ಕೋಡ್‌ ಆಫ್ ಕ್ರಿಮಿನಲ್ ಪ್ರೊಸೀಜರ್ 1973 ಹಾಗೂ ಇಂಡಿಯನ್ ಎವಿಡೆನ್ಸ್‌ ಆ್ಯಕ್ಟ್‌ 1872 ಅನ್ನು ರದ್ದುಪಡಿಸಿ, ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ (BSA) ವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 

ADVERTISEMENT

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ‘ಸಾಕಷ್ಟು ಚರ್ಚೆ ಹಾಗೂ ಸಮಾಲೋಚನೆ ಇಲ್ಲದೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಈ ಶಾಸನಗಳು ಭಾರತೀಯ ಸಂವಿಧಾನದ ಅಡಿಯಲ್ಲಿದ್ದು, ಅದರನ್ವಯ ಇವುಗಳ ಜಾರಿಗೂ ಪೂರ್ವದಲ್ಲಿ ರಾಜ್ಯಗಳ ಅಭಿಪ್ರಾಯ ಸಂಗ್ರಹ ಅಗತ್ಯ. ಆದರೆ ತಮ್ಮ ಪ್ರತಿಕ್ರಿಯೆ ಆಧರಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಮರ್ಪಕ ಕಾಲಾವಕಾಶ ನೀಡಿಲ್ಲ. ಇದರ ಜಾರಿಗೂ ಪೂರ್ವದಲ್ಲಿ ವಿರೋಧ ಪಕ್ಷವನ್ನೂ ಸಂಪರ್ಕಿಸಿಲ್ಲ’ ಎಂದಿದ್ದಾರೆ.

‘ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾನೂನುಗಳ ಹೆಸರುಗಳು ಸಂಸ್ಕೃತದಲ್ಲಿದೆ. ಇದು ಭಾರತೀಯ ಸಂವಿಧಾನದ 348ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂಸತ್‌ ಅನುಮೋದಿಸುವ ಯಾವುದೇ ಕಾಯ್ದೆಗಳ ಹೆಸರುಗಳು ಇಂಗ್ಲಿಷ್‌ನಲ್ಲೇ ಇರಬೇಕು ಎಂದಿದೆ. 

‘ಈ ನೂತನ ಕಾನೂನಿನಲ್ಲಿ ಕೆಲವೊಂದು ದೋಷಗಳೂ ಇವೆ. ಉದಾಹರಣೆಗೆ ಬಿಎನ್‌ಎಸ್‌ 103ರಲ್ಲಿ ಎರಡು ವಿಭಾಗಗಳಿವೆ. ಕೊಲೆ ಪ್ರಕರಣದ ಎರಡು ಬೇರೆಬೇರೆ ಅಪರಾಧಗಳಿಗೆ ಒಂದೇ ರೀತಿಯ ಶಿಕ್ಷೆಯ ಪ್ರಮಾಣ ಇದೆ. ಬಿಎನ್‌ಎಸ್‌ಎಸ್‌ ಹಾಗೂ ಬಿಎನ್‌ಎಸ್ ನಡುವೆ ಸಾಕಷ್ಟು ಗೊಂದಲ ಇದೆ. ಇದರೊಂದಿಗೆ ಹೊಸ ಕಾನೂನು ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಚರ್ಚೆಗಳು ನಡೆಯಬೇಕಿವೆ. ಕಾನೂನು ಕಾಲೇಜುಗಳ ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕಿದೆ. ಅದಕ್ಕೆ ಸಾಕಷ್ಟು ಕಾಲಾವಕಾಶದ ಅಗತ್ಯವಿದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.

‘ನೂತನ ಕಾನೂನು ಜಾರಿಗೆ ಪೊಲೀಸ್, ನ್ಯಾಯಾಂಗ, ಬಂಧಿಖಾನೆ, ಪ್ರಾಸಿಕ್ಯೂಷನ್‌, ವಿಧಿವಿಜ್ಞಾನ ಇಲಾಖೆಗಳಲ್ಲೂ ತಾಂತ್ರಿಕವಾಗಿಯೂ ಬಹಳಷ್ಟು ಸಮಯ ಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರವು ಕಾನೂನು ಜಾರಿಯನ್ನು ಸದ್ಯಕ್ಕೆ ತಡೆಹಿಡಿಯಬೇಕು. ಎಲ್ಲಾ ರಾಜ್ಯಗಳೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.