ಮಾಸ್ಕೊ: ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಸೇನಾಪಡೆಗಳನ್ನು ಕಳುಹಿಸಿದರೆ ಅಣ್ವಸ್ತ್ರ ಬಳಕೆಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಪಾಶ್ಚಿಮಾತ್ಯ ದೇಶಗಳು ರಷ್ಯಾದ ಸಾಮರ್ಥ್ಯ ಕುಗ್ಗಿಸಲು ಪ್ರಯತ್ನಿಸುತ್ತಿವೆ. ರಷ್ಯಾದ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಆ ದೇಶಗಳ ನಾಯಕರು ಅರ್ಥ ಮಾಡಿಕೊಂಡಿಲ್ಲ’ ಎಂದರು.
‘ರಷ್ಯಾದ ವಿರುದ್ಧ ಬರುವವರನ್ನು ಹಿಮ್ಮೆಟ್ಟಿಸುವಷ್ಟು ಶಸ್ತ್ರಾಸ್ತ್ರಗಳು ರಷ್ಯಾದ ಬಳಿ ಇವೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಡೆಯು ಅಣ್ವಸ್ತ್ರಗಳ ಬಳಕೆ ಮತ್ತು ನಾಗರಿಕತೆ ನಾಶದ ಭೀತಿಯನ್ನು ಹುಟ್ಟಿಸುತ್ತದೆ. ಇದು ಅವರಿಗೆ ತಿಳಿದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ನ್ಯಾಟೊ ಸದಸ್ಯ ರಾಷ್ಟ್ರಗಳು ಉಕ್ರೇನ್‌ಗೆ ಸೇನಾಪಡೆಯನ್ನು ಕಳುಹಿಸಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್
ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಪುಟಿನ್ ಈ ಎಚ್ಚರಿಕೆ ನೀಡಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಸಲಹೆಯನ್ನು ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಇತರ ರಾಷ್ಟ್ರಗಳು ತಿರಸ್ಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.