ನವದೆಹಲಿ: ಕತಾರ್‌ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ಶಿಕ್ಷೆಯನ್ನು ಕತಾರ್ ನ್ಯಾಯಾಲಯವು ತಗ್ಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತಿಳಿಸಿದೆ.
‘ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಭಾರತದ ಮೇಲ್ಮನವಿಗೆ ಸಂಬಂಧಿಸಿದಂತೆ ಕತಾರ್‌ನ ನ್ಯಾಯಾಲಯವು ಇಂದು ತೀರ್ಪು ನೀಡಿದ್ದು, ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬೇಹುಗಾರಿಕೆ ಆರೋಪದಡಿ ಭಾರತ ಮೂಲದ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಬಂಧಿಸಿ ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು.
ದೋಹಾ ಮೂಲದ ದಹ್ರಾ ಗ್ಲೋಬಲ್ ಕಂಪನಿಯ ನೌಕರರಾಗಿದ್ದ ಭಾರತೀಯರನ್ನು ಆಗಸ್ಟ್ 2022ರಲ್ಲಿ ವಶಕ್ಕೆ ಪಡೆಯಲಾಗಿತ್ತು.ಈ ಕಂಪನಿಯು ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಹಾಗೂ ಇತರ ಸೇವೆಗಳನ್ನು ಒದಗಿಸುತ್ತಿತ್ತು. ಅವರ ಮೇಲಿನ ಆರೋಪಗಳು ಏನು ಎಂಬುದನ್ನು ಕತಾರ್ ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಕಳೆದ ತಿಂಗಳು ಭಾರತ ಸರ್ಕಾರವು ಕತಾರ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.
‘ತೀರ್ಪು ಪ್ರಕಟಿಸುವ ವೇಳೆ ಶಿಕ್ಷೆಗೀಡಾಗಿರುವ ಮಾಜಿ ಅಧಿಕಾರಿಗಳ ಕುಟುಂಬ ಸದಸ್ಯರ ಜೊತೆ ನಮ್ಮ ರಾಜತಾಂತ್ರಿಕರು ಮತ್ತು ಇತರೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಈ ವಿಷಯದಲ್ಲಿ ನಾವು ಮೊದಲಿನಿಂದಲೂ ಅವರ ಪರ ನಿಂತಿದ್ದೇವೆ. ನಮ್ಮ ರಾಜತಾಂತ್ರಿಕ ಮತ್ತು ಕಾನೂನು ನೆರವನ್ನು ಮುಂದುವರಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತೀರ್ಪಿನ ಸಂಪೂರ್ಣ ಮಾಹಿತಿಗಾಗಿ ಕಾಯುತ್ತಿದ್ದೇವೆ. ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತಂತೆ ಚರ್ಚಿಸಲು ಕಾನೂನು ತಂಡ ಮತ್ತು ಶಿಕ್ಷೆಗೊಳಗಾದವರ ಕುಟುಂಬದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದೂ ತಿಳಿಸಲಾಗಿದೆ.
‘ಈ ಪ್ರಕ್ರಿಯೆಯು ಅತ್ಯಂತ ಸೂಕ್ಷ್ಮ ಮತ್ತು ಗೋಪ್ಯತೆಯಿಂದ ಕೂಡಿದ್ದಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಎಂಇಎ ತಿಳಿಸಿದೆ.
ತೀರ್ಪಿನ ವಿವರದ ಪ್ರತಿ ಇನ್ನೂ ಬಿಡುಗಡೆಯಾಗದಿರುವ ಕಾರಣ, ದೀರ್ಘಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆಯೇ ಅಥವಾ ಯಾವ ಮಟ್ಟಿಗೆ ಶಿಕ್ಷೆ ಪ್ರಮಾಣ ತಗ್ಗಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕ್ಯಾಪ್ಟನ್ ನವತೇಜ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಠ, ಕಮಾಂಡರ್‌ಗಳಾದ ಪೂರ್ಣೇಂದು ತಿವಾರಿ, ಅಮಿತ್ ನಾಗಪಾಲ್, ಎಸ್.ಕೆ. ಗುಪ್ತಾ, ಬೀರೇಂದ್ರ ಕುಮಾರ್ ವರ್ಮಾ, ಸುಗುಣಕರ್ ಪಕಾಳಾ ಮತ್ತು ನಾವಿಕ ರಾಗೇಶ್ ಅವರು ಶಿಕ್ಷೆಗೆ ವಿಧಿಸಲಾದ ಅಧಿಕಾರಿಗಳು.
ನವತೇಜ್ ಗಿಲ್ ಅವರು ನೌಕಾಪಡೆಯ ಅಕಾಡೆಮಿಯಲ್ಲಿ ಪದವಿ ಪಡೆದಾಗ ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕೃತರಾಗಿದ್ದು, ನಂತರ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.