ನವದೆಹಲಿ: 2022ರಲ್ಲಿ ಬಂಧಿಸಲಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ನಿವೃತ್ತ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ. ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಇತ್ತೀಚೆಗೆ ನ್ಯಾಯಾಲಯವು ತೆರವು ಮಾಡಿತ್ತು.
ಇಸ್ರೇಲ್ ಪರವಾಗಿ ಅವರು ಬೇಹುಗಾರಿಕೆ ಮಾಡುತ್ತಿದ್ದರು ಎಂಬ ಆರೋಪದಡಿ ಕಳೆದ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಅವರ ಮೇಲಿನ ಆರೋಪಗಳನ್ನು ಭಾರತ ಮತ್ತು ಕತಾರ್ ಖಚಿತಪಡಿಸಿಲ್ಲ.
‘ಭಾರತೀಯರನ್ನು ಬಿಡುಗಡೆಗೊಳಿಸಿದ ಕತಾರ್ ಸರ್ಕಾರದ ನಿರ್ಧಾರವನ್ನು ಪ್ರಶಂಸಿಸುತ್ತೇವೆ. ಬಿಡುಗಡೆಯಾದ 8 ಮಂದಿಯಲ್ಲಿ 7 ಮಂದಿ ದೇಶಕ್ಕೆ ವಾಪಸ್ ಆಗಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ಭಾರತಕ್ಕೆ ವಾಪಸ್ ಆಗಲು 18 ತಿಂಗಳು ಕಾಯಬೇಕಾಯಿತು. ನಾವು ಪ್ರಧಾನಿಗೆ ಅತ್ಯಂತ ಆಭಾರಿಯಾಗಿದ್ದೇವೆ. ಅವರಿಗೆ ಕತಾರ್ ಜೊತೆ ಉತ್ತಮ ಬಾಂಧವ್ಯವಿದ್ದು, ಅವರು ವೈಯಕ್ತಿಕವಾಗಿ ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಬಿಡುಗಡೆಗೆ ಬಹಳವಾಗಿ ಶ್ರಮಿಸಿದ ಭಾರತ ಸರ್ಕಾರಕ್ಕೆ ನಮ್ಮ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಭಾರತಕ್ಕೆ ಹಿಂದಿರುಗಿದ ನೌಕಾಪಡೆಯ ಮಾಜಿ ಅಧಿಕಾರಿ ಹೇಳಿದ್ದಾರೆ.
ಕತಾರ್‌ನ ಖಾಸಗಿ ಕಂಪನಿಯೊಂದರಲ್ಲಿ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಯೋಜನೆಗಾಗಿ ಈ 8 ಮಂದಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಅವರನ್ನು ಬೇಹುಗಾರಿಕೆ ಆರೋಪದಡಿ ಬಂಧಿಸಲಾಗಿತ್ತು.
8 ಲಕ್ಷಕ್ಕೂ ಅಧಿಕ ಭಾರತೀಯರು ಕತಾರ್‌ನಲ್ಲಿ ಕೆಲಸ ಮತ್ತು ಇನ್ನಿತರ ಕಾರಣಗಳಿಂದ ವಾಸಿಸುತ್ತಿದ್ದಾರೆ. ಭಾರತಕ್ಕೆ ನೈಸರ್ಗಿಕ ಅನಿಲ ಸರಬರಾಜು ರಾಷ್ಟ್ರಗಳಲ್ಲಿ ಕತಾರ್ ಪ್ರಮುಖವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.