ನವದೆಹಲಿ (ಪಿಟಿಐ): ಜಪಾನ್‌ನಲ್ಲಿ ಮೇ 24 ರಂದು ನಡೆಯುವ ಕ್ವಾಡ್ ನಾಯಕರ ಶೃಂಗಸಭೆಯು ನಾಲ್ಕು ದೇಶಗಳ ನಾಯಕರಿಗೆ ಈವರೆಗಿನ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿನ ಬೆಳವಣಿಗೆಗಳು ಹಾಗೂ ಪರಸ್ಪರ ಹಿತಾಸಕ್ತಿ ಕುರಿತ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಮೋದಿ ಅವರು ಮೇ 23 ಹಾಗೂ 24 ರಂದು ಜಪಾನ್‌ಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಬಲವರ್ಧನೆಗೊಳಿಸುವ ಬಗ್ಗೆ ಚರ್ಚಿಸಲಿದ್ದಾರೆ.
‘ಪ್ರಾದೇಶಿಕ ಅಭಿವೃದ್ಧಿ ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳ ಕುರಿತು ಮಾತುಕತೆ ಮುಂದುವರಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.
‘ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಟೋಕಿಯೊಗೆ ಭೇಟಿ ನೀಡಲಿದ್ದೇನೆ. ಭೇಟಿಯ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯೊಂದಿಗೆ ಮಾತುಕತೆಯನ್ನು ಮತ್ತಷ್ಟು ಮುಂದುವರಿಸಲು ಎದುರು ನೋಡುತ್ತಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.
ಭಾರತ ಮತ್ತು ಜಪಾನ್ ನಡುವಿನ ಆರ್ಥಿಕ ಸಹಕಾರವು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ ಎಂದೂ ಪ್ರಧಾನಿ ಹೇಳಿಕೆಯಲ್ಲಿ ಹೇಳಿದ್ದಾರೆ. ಇದೇ ಮಾರ್ಚ್‌ನಲ್ಲಿ ಭಾರತ-ಜಪಾನ್‌ನ 14 ನೇ ವಾರ್ಷಿಕ ಶೃಂಗಸಭೆ ನಡೆದಿದ್ದು, ಕಿಶಿದಾ ಅವರು ಭಾಗವಹಿಸಿದ್ದರು.
‘ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ಜಪಾನಿನ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಾಗುವುದು. ಜಪಾನ್‌ನಲ್ಲಿರುವ ಸುಮಾರು 40,000 ಭಾರತೀಯರೊಂದಿಗೆ ಸಂವಾದ ನಡೆಸಲಾಗುವುದು’ ಎಂದೂ ತಿಳಿಸಿದ್ದಾರೆ.
‘ನೂತನವಾಗಿ ಚುನಾಯಿತರಾದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೆ ಬರಲಿದ್ದಾರೆ. ಆಸ್ಟ್ರೇಲಿಯಾ, ಜಪಾನ್ ಹಾಗೂ ಅಮೆರಿಕದೊಂದಿಗೆ ಭದ್ರತಾ ವಿಷಯ ಕುರಿತು ಚರ್ಚೆ ನಡೆಸಲಾಗುವುದು. ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಹಕಾರ ಹಾಗೂ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.