ಇಸ್ಲಾಮಾಬಾದ್: ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ, ಆತನಿಗೆ ಆರೋಗ್ಯ ಸರಿ ಇಲ್ಲ, ಮನೆಯಿಂದ ಹೊರಗೆ ಹೋಗುವ ಸ್ಥಿತಿಯಲ್ಲಿ ಆತ ಇಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಸಾಬೀತಾಗಬಹುದಾದ ‘ಗಟ್ಟಿ’ ಮತ್ತು ‘ನಿರ್ವಿವಾದ’ ಸಾಕ್ಷ್ಯಗಳನ್ನು ಭಾರತ ಕೊಟ್ಟರೆ ಮಾತ್ರ ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆ ಭಾಗಿಯಾಗಿದೆ ಮತ್ತು ಈ ಸಂಘಟನೆಯ ನೆಲೆಗಳು ಪಾಕಿಸ್ತಾನದಲ್ಲಿವೆ, ಅದರ ಮುಖ್ಯಸ್ಥ ಕೂಡ ಅಲ್ಲಿಯೇ ಇದ್ದಾನೆ ಎಂಬ ಪುರಾವೆಗಳನ್ನು ಪಾಕಿಸ್ತಾನಕ್ಕೆ ಭಾರತ ಹಸ್ತಾಂತರಿಸಿದೆ. ಈ ಭಯೋತ್ಪಾದಕ ಸಂಘಟನೆಯ ಜಾಲ ಪಾಕಿಸ್ತಾನದಲ್ಲಿ ಇದೆ ಎಂಬ ಸತ್ಯವನ್ನು ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕತ್ವ ಅಲ್ಲಗಳೆಯುತ್ತಿದೆ ಎಂಬ ಬಗ್ಗೆ ಭಾರತ ವಿಷಾದವನ್ನೂ ವ್ಯಕ್ತಪಡಿಸಿದೆ.
ಜಾಗತಿಕ ಉಗ್ರರ ಪಟ್ಟಿಯಲ್ಲಿ ಮಸೂದ್‌ನನ್ನು ವಿಶ್ವಸಂಸ್ಥೆ ಸೇರಿಸಬೇಕು ಎಂದು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ಮಿತ್ರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರ ಚೀನಾ ಈ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಲೇ ಬಂದಿದೆ.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.