ನವದೆಹಲಿ: ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರದ ವೇಳೆ ಕತ್ತಿ ಹಿಡಿದು ಝಳಪಿಸುತ್ತಾ ಪ್ರತಿಭಟನಕಾರರನ್ನು ಪ್ರಚೋದಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಣಿಂದರ್ ಸಿಂಗ್ (30) ಎಂದು ಗುರುತಿಸಲಾಗಿದೆ. ಕಾರ್ ಎಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿರುವ ಈತನನ್ನು ಮಂಗಳವಾರ ರಾತ್ರಿ 7.45ರ ಸುಮಾರಿಗೆ ವಾಯವ್ಯ ದೆಹಲಿಯ ಪಿತಾಂಪುರದ ಸಿ ಡಿ ಬ್ಲಾಕ್ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ.
‘ನಮಗೆ ಲಭ್ಯವಾಗಿರುವ ವಿಡಿಯೊದಲ್ಲಿ ಬಂಧಿತ ಸಿಂಗ್, ಕೆಂಪುಕೋಟೆಯ ಬಳಿ ಎರಡು ಕತ್ತಿಗಳನ್ನು ಹಿಡಿದು ಝಳಪಿಸುತ್ತಾ ಪ್ರತಿಭಟನಕಾರರು, ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿದ್ದವರನ್ನು ಉತ್ತೇಜಿಸುತ್ತಿರುವ ದೃಶ್ಯಗಳಿವೆ‘ ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಕೋಶ) ಪ್ರಮೋದ್ ಸಿಂಗ್ ಕುಶ್ವಾ ತಿಳಿಸಿದ್ದಾರೆ.
ದೆಹಲಿಯ ಸ್ವರೂಪ್ ನಗರದಲ್ಲಿರುವ ತನ್ನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಕತ್ತಿ ವರಸೆ ಕಲಿಸುವ ಶಾಲೆ ನಡೆಸುತ್ತಿರುವ ಸಿಂಗ್, ಫೇಸ್‌ಬುಕ್‌ನ ವಿವಿಧ ಗುಂಪುಗಳಲ್ಲಿದ್ದ ಪೋಸ್ಟ್‌ಗಳಿಂದ ಪ್ರಚೋದನೆಗೊಂಡು, ಅದನ್ನು ಬೇರೆಯವರಿಗೂ ಹಂಚಿದ್ದಾನೆ. ಆಗಾಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಿಂಘು ಗಡಿಗೆ ಭೇಟಿ ನೀಡುತ್ತಿದ್ದ. ಅಲ್ಲಿ ರೈತರ ನಾಯಕರು ಮಾಡುತ್ತಿದ್ದ ಭಾಷಣಗಳಿಂದ ಪ್ರೇರೇಪಿತಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.