ಕೋಲ್ಕತ್ತ: ಕೋಲ್ಕತ್ತದ ಆರ್.ಜಿ. ಕರ್ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಟಿಎಂಸಿ ಶಾಸಕ ಸುದಿಪ್ತ ರಾಯ್ ಅವರಿಗೆ ಜಾರಿ ನಿರ್ದೆಶನಾಲಯವು(ಇ.ಡಿ) ಸಮನ್ಸ್ ಜಾರಿ ಮಾಡಿದೆ.
ರಾಯ್ ಅವರು ಪಶ್ಚಿಮ ಬಂಗಾಳದ ಮೆಡಿಕಲ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದು, ಆರ್.ಜಿ. ಆಸ್ಪತ್ರೆಯ ರೋಗಿಗಳ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ಸೆರಾಂಪೋರ್ ಸೇರಿದಂತೆ ಶಾಸಕರಿಗೆ ಸೇರಿದ ಸ್ಥಳಗಳ ಮೇಲೆ ಮಂಗಳವಾರ ಇ.ಡಿ ದಾಳಿ ನಡೆಸಿತ್ತು.
ಕೋಲ್ಕತ್ತದ ಇ.ಡಿ ಕಚೇರಿಯಲ್ಲಿ ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಮತ್ತು ಅವರ ಮೂವರು ಸಹಚರರನ್ನು ಸಿಬಿಐ ಬಂಧಿಸಿದೆ. ಸಿಬಿಐ ಎಫ್‌ಐಆರ್ ಆಧರಿಸಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ಹಲವು ಸೆಕ್ಷನ್‌ಗಳ ಅಡಿ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ.
ಆಗಸ್ಟ್ 9ರಂದು ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವೈದ್ಯರು ತೀವ್ರ ಹೋರಾಟ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಹಣಕಾಸು ಅಕ್ರಮಗಳೂ ಬೆಳಕಿಗೆ ಬಂದಿವೆ.
ಸಂದೀಪ್ ಘೋಷ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಇ.ಡಿ, ಸಂದೀಪ್ ಅವರ ಪತ್ನಿ ಸರ್ಕಾರದಿಂದ ಸೂಕ್ತ ಅನುಮತಿ ಪಡೆಯದೇ ಎರಡು ಸ್ಥಿರಾಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.