ತಿರುವನಂತಪುರ: ಮಲಯಾಳ ಸಿನಿಮಾ ಚಿತ್ರೀಕರಣ ಸೆಟ್‌ನಲ್ಲಿರುವ ಕ್ಯಾರವಾನ್‌ಗಳಲ್ಲಿ ನಟಿಯರ ವಿಡಿಯೊಗಳನ್ನು ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ನಟರು ಅದನ್ನು ತಮ್ಮ ಮೊಬೈಲ್‌ಗಳಲ್ಲಿ ವೀಕ್ಷಿಸುತ್ತಿರುವುದನ್ನೂ ನಾನು ಗಮನಿಸಿದ್ದೇನೆ ಎಂದು ನಟಿ ರಾಧಿಕಾ ಶರತ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿಯ ವರದಿ ವಿಳಂಬವಾಗಿದ್ದಕ್ಕೆ ಅಚ್ಚರಿಯನ್ನೂ ವ್ಯಕ್ತಪಡಿಸಿರುವ ಅವರು, ಕೇವಲ ಮಲಯಾಳ ಮಾತ್ರವಲ್ಲ, ಇತರೆ ಚಿತ್ರರಂಗದಲ್ಲೂ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
‘ಕ್ಯಾರವಾನ್‌ಗಳಲ್ಲಿ ಇರಿಸಲಾಗಿದ್ದ ರಹಸ್ಯ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಿದ ನಟಿಯರ ವಿಡಿಯೊಗಳನ್ನು ನಟರು ಮೊಬೈಲ್‌ನಲ್ಲಿ ನೋಡುವುದನ್ನು ಗಮನಿಸಿದ್ದೇನೆ. ನಟಿಯರು ಬಟ್ಟೆ ಬದಲಾಯಿಸುವ ವಿಡಿಯೊಗಳನ್ನು ಅವರು ವೀಕ್ಷಿಸುತ್ತಿದ್ದರು’ ಎಂದು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಯಾವ ಸಿನಿಮಾ ಸೆಟ್‌ನಲ್ಲಿ ಈ ಘಟನೆ ನಡೆದಿದೆ ಅಥವಾ ವಿಡಿಯೊ ನೋಡುತ್ತಿದ್ದ ನಟ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
‘ಅದನ್ನು ನೋಡಿ ನನಗೆ ಕೋಪ ಬಂದಿತ್ತು. ಜೊತೆಗೆ ನನ್ನ ಸುರಕ್ಷತೆಯೂ ಮುಖ್ಯವಾಗಿತ್ತು. ಹೀಗಾಗಿ ಕ್ಯಾರವಾನ್ ಬೇಡ ಎಂದು ನಾನು ಹೋಟೆಲ್ ಕೋಣೆಗೆ ಹಿಂದಿರುಗಿದೆ’ ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಬಗ್ಗೆ ನಟರು ಮೌನವಾಗಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.