ADVERTISEMENT

ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಬಂತಿದೋ ರಫೇಲ್

ಆರ್‌.ಜೆ.ಯೋಗಿತಾ
Published 29 ಜುಲೈ 2020, 9:58 IST
Last Updated 29 ಜುಲೈ 2020, 9:58 IST
   

ಹೆಚ್ಚುಕಡಿಮೆ ಹದಿನೈದು ದಿನಗಳಿಂದ ಕಾಂಗ್ರೆಸ್‌–ಬಿಜೆಪಿ ರಫೇಲ್, ರಫೇಲ್ ಅಂತ ಹೇಳುತ್ತಲೇ ಇವೆ. ಇಷ್ಟು ದೊಡ್ಡ ದೇಶಕ್ಕೆ ಶಕ್ತಿಶಾಲಿ ವಾಯುಪಡೆ ಬೇಡವೇ? ಇನ್ನೂ ಎಷ್ಟು ದಿನ ಅಂತ ನಮ್ಮ ವಾಯುಪಡೆಯ ಪೈಲಟ್‌ಗಳು ಹಳೇ ಮಿಗ್ ವಿಮಾನಗಳನ್ನೇ ಬಳಸುತ್ತಾಕಾಲಹಾಕಬೇಕು. ಹಳತು ಬದಿಗೆ ಸರಿದಂತೆ ಹೊಸತು ಸೇರ್ಪಡೆಯಾಗುವುದು ಬೇಡವೇ?

ಹೀಗೆಲ್ಲಾ ಯೋಚನೆ ಮಾಡಿದಾಗ ‘ರಫೇಲ್‌ನಂಥ ಅತ್ಯಾಧುನಿಕ ಯುದ್ಧವಿಮಾನಗಳು ಭಾರತಕ್ಕೆ ಬೇಕೇಬೇಕು’ ಎಂಬ ಒಕ್ಕೊರಲ ಮಾತು ದೇಶದ ಯುವಸಮೂಹದಿಂದ ಹೊಮ್ಮುವುದು ಸಹಜ. ದೇಶದ ಭದ್ರತೆಗೆ ಸಶಸ್ತ್ರಪಡೆಗಳ ಆಧುನೀಕರಣ ಅನಿವಾರ್ಯ ಎಂದಾದ ಮೇಲೆ ವಿವಾದ ಏಕೆ? ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನೀಡಿದ ಹೇಳಿಕೆ, ಕಾಂಗ್ರೆಸ್ ಆರೋಪ, ಬಿಜೆಪಿ ಸಮರ್ಥನೆಗೆ ದೇಶದ ಮಾಧ್ಯಮಗಳು ಇಷ್ಟೇಕೆ ಪ್ರಾಮುಖ್ಯತೆ ಕೊಡುತ್ತಿವೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಆಸೆ ಇದ್ದರೆ ಈ ಬರಹವನ್ನು ನೀವು ಪೂರ್ತಿ ಓದಬೇಕು.

1) ‘ರಫೇಲ್‌’ ಹಾಗೆಂದರೇನು?

ADVERTISEMENT

ರಫೇಲ್ ಅನ್ನೋದು ನಮ್ಮ ವಾಯುಪಡೆ ಆಯ್ಕೆ ಮಾಡಿಕೊಂಡಿರುವ, ಡಸಲ್ಟ್ (Dassault) ಕಂಪನಿ ತಯಾರಿಕೆಯ ಎರಡು ಎಂಜಿನ್‌ನ ಯುದ್ಧ ವಿಮಾನದ ಹೆಸರು. ಈಗ ಕನ್ನಡ ಮಾಧ್ಯಮಗಳಲ್ಲಿ ಫ್ರೆಂಚ್ ಕಂಪನಿಯ ಹೆಸರನ್ನು ಡಸಲ್ಟ್ ಎಂದು ಬರೆಯಲಾಗುತ್ತಿದೆ. ಫ್ರೆಂಚ್‌ನಲ್ಲಿ ‘ಡಸಾ’ ಎನ್ನುತ್ತಾರೆ. ಹೀಗೆಂದರೆ ಗಾಳಿ ಹೊಡೆತ (gust of wind) ಎಂದು ಅರ್ಥ.

2) ವಾಯುಪಡೆಗೆ ‘ರಫೇಲ್‌’ ಮೇಲೆ ಲವ್ ಆಗಿದ್ದು ಏಕೆ?

ವಾಯುಪಡೆಗೆ ರಫೇಲ್ ಮೇಲೆ ಲವ್ ಆಗಿರುವುದು ನಿಜ, ಆದರೆ ಅದು ‘ಲವ್ ಅಟ್ ಫಸ್ಟ್ ಸೈಟ್’ ಅಲ್ಲ. ತನ್ನ ದೇಶದ ಸಶಸ್ತ್ರಪಡೆಗಳ ಬತ್ತಳಿಕೆ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು ಅನ್ನೋದು ಎಲ್ಲ ಸರ್ಕಾರಗಳ ಕಾಳಜಿ. ನಮ್ಮ ದೇಶದ ಉತ್ತರದಲ್ಲಿರುವ ಚೀನಾ, ಪಶ್ಚಿಮದಲ್ಲಿರುವ ಪಾಕಿಸ್ತಾನ ಯಾವ್ಯಾವುದೋ ಕಾರಣಕ್ಕೆ ಕುಚಿಕುಕುಚಿಕು ಫ್ರೆಂಡ್ಸ್ ಆಗಿವೆ. ನಮ್ಮ ದೇಶ ಮಾತ್ರ ಪಾಕಿಸ್ತಾನ–ಚೀನಾ ಜೊತೆಗೆ ಗಡಿವಿವಾದ, ಚೀನಾದೊಂದಿಗೆ ಗಡಿ ಜೊತೆಗೆ ವಾಣಿಜ್ಯ ಸಮರ, ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಮೇಲಾಟಗಳಲ್ಲಿ ಹೋರಾಡುತ್ತಿದೆ. ಇಂಥ ಯಾವುದೋ ಒಂದು ಪಿಳ್ಳೇನೆವದಿಂದ ಪಾಕ್–ಚೀನಾ ಒಂದಾಗಿ ನಮ್ಮ ಮೇಲೆ ಮುಗಿಬಿದ್ದರೆ? ಈ ‘ರೇ’ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ನಮ್ಮ ರಕ್ಷಣಾ ಪಡೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗಾಗಿಯೇ ವಾಯುಪಡೆಯು ಬಹುಮುಖಿ ಸಾಮರ್ಥ್ಯವಿರುವ ಯುದ್ಧವಿಮಾನಗಳ ಖರೀದಿಗೆ 2009ರಲ್ಲಿ ಜಾಗತಿಕ ಟೆಂಡರ್ ಕರೆದಿತ್ತು. ಹಲವು ಹಂತಗಳ ಪರೀಕ್ಷೆ ಮತ್ತು ಲೆಕ್ಕಾಚಾರಗಳ ನಂತರ ರಫೇಲ್‌ ಯುದ್ಧವಿಮಾನಗಳ ಖರೀದಿಗೆ ವಾಯುಪಡೆ ಒಲವು ತೋರಿತು. ಇದು ಖಂಡಿತ ಲವ್‌ ಅಟ್ ಫಸ್ಟ್ ಸೈಟ್ ಅಲ್ಲ, ಇನ್ನೂ ವಿವರಿಸಿ ಹೇಳೋದಾದ್ರೆ ಲವ್ ಮ್ಯಾರೇಜ್ ಕೂಡಾ ಅಲ್ಲ.

3) ‘ರಫೇಲ್’ ಕೊಳ್ಳೋದು ಅನಿವಾರ್ಯವಾಗಿತ್ತಾ?

ಇದೊಂಥರಾ ನಾಜೂಕು ಪ್ರಶ್ನೆ. ಇತ್ತು ಅಂದ್ರೆ ಇತ್ತು, ಇಲ್ಲ ಅಂದ್ರೆ ಇಲ್ಲ.

ಹೋರಾಟದ ಸಾಮರ್ಥ್ಯದ ವಿಷಯಕ್ಕೆ ಬಂದರೆ ನಮ್ಮ ವಾಯುಪಡೆ ಇಂದಿಗೂ 60–70ರ ದಶಕದಲ್ಲಿ ನಿರ್ಮಿಸಿದ್ದ ‘ಮಿಗ್–21’ ಫೈಟರ್ ವಿಮಾನಗಳನ್ನೇ ನೆಚ್ಚಿಕೊಂಡಿದೆ. ಇವನ್ನು ಹಂತಹಂತವಾಗಿ ಬದಿಗೆ ಸರಿಸಿ, ಹೊಸ ವಿಮಾನಗಳ ಸ್ಕ್ವಾಡ್ರನ್ (ತುಕಡಿ) ರಚಿಸಲು ವಾಯುಪಡೆ ನಿರ್ಧರಿಸಿದೆ.2016ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡಿದ್ದ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿಸಿದ್ದ ಹಗುರ ಯುದ್ಧ ವಿಮಾನ ‘ತೇಜಸ್‌’ನ ಸಾಮರ್ಥ್ಯ ಮತ್ತು ಗುಣಮಟ್ಟ ಇನ್ನೂ ವಾಯುಪಡೆಗೆ ನೆಚ್ಚಿಗೆಯಾಗಿಲ್ಲ. ಹೀಗಾಗಿ ಹೊಸ ಯುದ್ಧ ವಿಮಾನಗಳ ಖರೀದಿ ಅನಿವಾರ್ಯವಾಯಿತು. 2009ರ ಟೆಂಡರ್‌ನಲ್ಲಿ ಕಡಿಮೆ ದರ ನಮೂದಿಸಿದ್ದ ರಫೇಲ್, ವಾಯುಪಡೆಯ ಪರೀಕ್ಷೆಗಳನ್ನೂ ಪಾಸ್ ಮಾಡಿದ್ದರಿಂದ ಖರೀದಿ ಒಪ್ಪಂದಕ್ಕೆ ಸರ್ಕಾರ ಮುಂದಾಯಿತು.

4) ಅದೆಲ್ಲಾ ಸರಿ, ‘ರಫೇಲ್‌’ ರೆಡಿ ಮಾಡೋರು ಯಾರು?

ನೀವು ರಫೇಲ್ ವಿಮಾನವನ್ನು ಒಂದು ಶರೀರ ಅಂದುಕೊಳ್ಳಿ. ಅದರ ಹಂದರವನ್ನು(ಮೇನ್ ಪ್ಲಾಟ್‌ಫಾರಂ–ಬಾಡಿ) ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ಕಂಪನಿ ರೆಡಿ ಮಾಡುತ್ತೆ. ಇನ್ನು ಅಸ್ಥಿಪಂಜರದ ಒಳಹೊರಗೆ ವ್ಯಾಪಿಸಿಕೊಂಡಿರುವ ರಕ್ತ, ಮಾಂಸ, ಮಜ್ಜೆಗಳನ್ನು, ಅಂದರೆ ವೈಮಾನಿಕ ಎಲೆಕ್ಟ್ರಾನಿಕ್ಸ್ (ಏವಿಯಾನಿಕ್ಸ್), ಶಸ್ತ್ರಾಸ್ತ್ರಗಳು ಮತ್ತು ಎಂಜಿನ್‌ಗಳನ್ನು ಥಲೇಸ್, ಸ್ನೇಕ್ಮಾ, ಸ್ಯಾಫ್ರಾನ್‌ ಮತ್ತು ಎಂಬಿಡಿಎ ಸೇರಿದಂತೆ ಇತರ ಹಲವು ಕಂಪನಿಗಳು ಪೂರೈಸುತ್ತವೆ. ರಫೇಲ್ ವ್ಯವಹಾರ ಮಾಡುವ ಬಹುತೇಕ ಕಂಪನಿಗಳು ಫ್ರಾನ್ಸ್‌ನವೇ ಆಗಿವೆ. ಅಷ್ಟರಮಟ್ಟಿಗೆ ಅದೂ ದೇಶಭಕ್ತ ಕಂಪನಿಯೂ ಹೌದು!

5) ‘ಡಸಾಲ್ಟ್’ ಜೊತೆಗೆ ಹಿಂದೆ ಎಂದಾದರೂ ಭಾರತ ಡೀಲ್ ಮಾಡಿತ್ತಾ?

ಸರಿಯಾಗಿ 36 ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 1982ರಲ್ಲಿ ಡಸಾಲ್ಟ್ ಕಂಪನಿ ಜೊತೆಗೆ 40 ‘ಮಿರಾಜ್ 2000’ ಯುದ್ಧವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇಂದಿಗೂ ನಮ್ಮ ದೇಶದಲ್ಲಿ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ‘ಮಿರಾಜ್ 2000’ ಯುದ್ಧವಿಮಾನಗಳ ಎರಡು ಸ್ವಾಡ್ರನ್‌ಗಳಿವೆ. ಡಸಾಲ್ಟ್ ಮತ್ತು ಅದರ ಸಹವರ್ತಿ ಫ್ರಾನ್ಸ್‌ ಕಂಪನಿಗಳು ಇದೀಗ ಈ ವಿಮಾನಗಳನ್ನು ಮೇಲ್ದರ್ಜೆಗೇರಿಸುತ್ತಿವೆ.

6) ಬಿಜೆಪಿ–ಕಾಂಗ್ರೆಸ್ ಜಟಾಪಟಿ ಬಗ್ಗೆ ನಾನು ಗೂಗಲ್‌ನಲ್ಲಿ ಹುಡುಕಿದೆ. ನನಗೆರಫಾಯೆಲ್‌ (Rafael) ಮತ್ತು ರಫೇಲ್‌ (Rafale) ಅಂತ ಎರಡು ಕಂಪನಿಗಳು ಕಾಣಿಸಿದ್ವು. ಎರಡೂ ಒಂದೇನಾ?

ಇಲ್ಲ ಬಾಸ್, ಎರಡೂ ಬೇರೆಬೇರೆ. ರಫಾಯೆಲ್‌ ಅನ್ನೋದು ಇಸ್ರೇಲ್‌ ದೇಶದಲ್ಲಿರುವ ರಕ್ಷಣಾ ಕಂಪನಿ. ಭಾರತ ಒಪ್ಪಂದ ಮಾಡಿಕೊಂಡಿರುವುದು ಫ್ರಾನ್ಸ್‌ನ ರಫೇಲ್ ಕಂಪನಿಯ ಜೊತೆಗೆ. ಈಗ್ಲೇ ಈ ಡೀಲ್ ಬಗ್ಗೆ ನಮ್ಮ ಜನ ಸಿಕ್ಕಾಪಟ್ಟೆ ಕನ್‌ಫ್ಯೂಸ್ ಮಾಡಿಕೊಂಡಿದ್ದಾರೆ. ಇನ್ನೊಂದು ಹೊಸ ಗೊಂದಲ ಸೇರಿಸಬೇಡಿ, ಪ್ಲೀಸ್.

7) ರಫೇಲ್ ಹೇಗೆ ಆಯ್ಕೆ ಆಯಿತು?

ಇದು ಲವ್ ಅಟ್ ಫಸ್ಟ್ ಸೈಟ್ ಅಲ್ಲ ಅಂತ ಮೊದ್ಲೇ ಹೇಳಿಬಿಟ್ಟಿದ್ದೀವಿ. ನಮ್ಮ ಸರ್ಕಾರ ಮತ್ತು ವಾಯುಪಡೆ ಸಿಕ್ಕಾಪಟ್ಟೆ ಯೋಚ್ನೆ ಮಾಡಿ ತಗೊಂಡ ನಿರ್ಧಾರ ಇದು. 2007ರಲ್ಲಿ ವಾಯುಪಡೆ 126

ಮಧ್ಯಮಶ್ರೇಣಿ ಯುದ್ಧವಿಮಾನಗಳ (medium multirole combat aircraft– MMRCA) ಖರೀದಿಗೆ ವಾಯುಪಡೆಯು ಜಾಗತಿಕ ಟೆಂಡರ್‌ ಕರೆದಿತ್ತು. ಲಖೀದ್‌ ಮಾರ್ಟಿನ್‌ (ಎಫ್‌-16), ಡಸಾಲ್ಟ್‌ (ರಫೇಲ್‌), ಬೋಯಿಂಗ್‌ (ಎಫ್‌/ಎ-18), ರಷ್ಯನ್‌ ಏರ್‌ಕ್ರಾಫ್ಟ್‌ ಕಾರ್ಪೊರೇಷನ್‌ (ಮಿಗ್‌-35), ಸ್ವೀಡನ್‌ನ ಸಾಬ್‌ (ಗ್ರಿಫನ್‌), ಯೂರೊ ಫೈಟರ್‌ (ಟೈಫೋನ್) ಹಲವು ವಿಮಾನ ತಯಾರಿಕಾ ಕಂಪನಿಗಳು ವಾಯುಪಡೆಗೆ ವಿಮಾನಗಳನ್ನು ಮಾರಲು ಉತ್ಸಾಹ ತೋರಿದ್ದವು. ಸಾಕಷ್ಟು ಪರೀಕ್ಷೆಗಳ ಬಳಿಕ 2012ರಲ್ಲಿ ರಫೇಲ್ ಮತ್ತು ಯುರೊಫೈಟರ್‌ ಟೈಫೂನ್ವಿಮಾನಗಳ ಖರೀದಿಗೆ ವಾಯುಪಡೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಕೊನೆಗೆ ಅದರಲ್ಲಿ ರಫೇಲ್‌ ವಿಮಾನಕ್ಕೆ ನಮ್ಮ ದೇಶಕ್ಕೆ ಬರುವ ಅದೃಷ್ಟ ಬಂತು. ರಫೇಲ್‌ ಕಂಪನಿಯನ್ನು ಆಯ್ಕೆ ಮಾಡಿಕೊಂಡ ನಂತರವೂ, ಬೆಲೆ ವಿಚಾರದಲ್ಲಿ ಗೊಂದಲ ಇದ್ದ ಕಾರಣ ವಾಯುಪಡೆ ತಕ್ಷಣಕ್ಕೆ ಖರೀದಿ ಒಪ್ಪಂದ ಮಾಡಿಕೊಂಡಿರಲಿಲ್ಲ.

8) ರಫೇಲ್‌ ದುಬಾರಿಯೇ?

2007ರಲ್ಲಿ 126 ಯುದ್ಧ ವಿಮಾನಗಳಿಗೆ ಟೆಂಡರ್‌ ಕರೆದಾಗ, ರಕ್ಷಣ ಸಚಿವಾಲಯ ಈ ಯುದ್ಧ ವಿಮಾನಗಳ ಖರೀದಿಯ ವೆಚ್ಚ ₹42 ಸಾವಿರ ಕೋಟಿಯಾಗಲಿದೆ ಎಂದು ಅಂದಾಜಿಸಿತ್ತು. ಸದ್ಯ ಖರೀದಿಸಲು ಉದ್ದೇಶಿಸಿರುವ 36 ಯುದ್ಧ ವಿಮಾನಗಳ ವೆಚ್ಚ ಸುಮಾರು ₹59 ಸಾವಿರ ಕೋಟಿ ಆಗಲಿದೆ.

9) 126 ಮತ್ತು 36... ಏನಿವು ಎರಡು ಸಂಖ್ಯೆಗಳು?

‘ಒಂದೇ ಸಲಕ್ಕೆ ಚೀನಾ–ಪಾಕಿಸ್ತಾನ ಮೇಲೆ ಬಿದ್ದರೆ ನೀವು ತಿರುಗೇಟು ಕೊಡೋಕೆ ರೆಡಿ ಇರಿ’ ಅಂತ ನಮ್ಮ ಕೇಂದ್ರ ಸರ್ಕಾರ 2009ರಲ್ಲಿ ವಾಯುಪಡೆಗೆ ಒಂದು ‘ಕಾರ್ಯಾಚರಣೆ ನಿರ್ದೇಶನ’ ಕೊಟ್ಟಿತ್ತು. ಇದು ಸಾಧ್ಯವಾಗಬೇಕು ಅಂದ್ರೆ ರಫೇಲ್ ಯುದ್ಧವಿಮಾನಗಳ ಆರು ಸ್ಕ್ವಾಡ್ರನ್‌ಗಳು (126 ವಿಮಾನಗಳು) ಬೇಕಾಗಬಹುದು ಎಂದು ವಾಯುಪಡೆ ಅಂದಾಜಿಸಿತ್ತು.2015ರಲ್ಲಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ 36 ವಿಮಾನಗಳನ್ನು ಖರೀದಿಸುವ ನಿರ್ಧಾರ ತೆಗೆದುಕೊಂಡರು. 2016ರ ಸೆಪ್ಟೆಂಬರ್‌ನಲ್ಲಿ ಆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಂತಿಮ ಮೊತ್ತ ಇತ್ಯರ್ಥವಾಗದ ಕಾರಣ, ಮೊದಲಿನ ಪ್ರಸ್ತಾಪವಾಗಿದ್ದ 126 ವಿಮಾನಗಳ ಖರೀದಿ ಒಪ್ಪಂದ ನನೆಗುದಿಗೆ ಬಿತ್ತು.

10) ರಫೇಲ್‌ ವೈಶಿಷ್ಟ್ಯವೇನು?

ಆಕಾಶದಲ್ಲಿ ಹಾರುತ್ತಿರುವಾಗಲೇ ಎದುರಾಳಿ ವಿಮಾನಗಳಿಗೆ ಬಾಂಬ್ ಎಸೆಯುವ (ಏರ್‌ ಟು ಏರ್), ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ (ಏರ್‌ ಟು ಅರ್ತ್),ಭಾರತದ ವೈವಿಧ್ಯಮಯ ಹವಾಮಾನದಲ್ಲಿ ಕಾರ್ಯನಿರ್ವಹಿಸಬಲ್ಲ, ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ ನಡೆಸಬಲ್ಲ (ಸ್ಟಾಂಡ್‌ಆಫ್ ಸಾಮರ್ಥ್ಯ) ಬಹುಮುಖಿ (ಮಲ್ಟಿರೋಲ್) ಯುದ್ಧವಿಮಾನ ನಮಗೆ ಬೇಕು ಅನ್ನೋದು ವಾಯುಪಡೆಯ ಬೇಡಿಕೆಯಾಗಿತ್ತು. ಡಸಾಲ್ಟ್‌ ಕಂಪೆನಿಯು ತನ್ನ ರಫೇಲ್‌ ಯುದ್ಧವಿಮಾನವನ್ನು ‘ಸಕಲ ಕೆಲಸಗಳನ್ನೂ ಮಾಡಬಲ್ಲ’ (omnirole) ಯುದ್ಧವಿಮಾನ ಎಂದು ಬಣ್ಣಿಸುತ್ತದೆ. ಸ್ಟಾಂಡ್‌ಆಫ್‌ ಸಾಮರ್ಥ್ಯದ ಬೇಡಿಕೆ ಈಡೇರಿಸಲು ರಫೇಲ್ ಮೀಟಿಯೋರ್ (ಏರ್‌ ಟು ಏರ್) ಮತ್ತು ಸ್ಕಾಲ್ಪ್ (ಏರ್‌ ಟು ಅರ್ತ್) ಕ್ಷಿಪಣಿಗಳನ್ನು ಒದಗಿಸುತ್ತದೆ.

ಮನುಷ್ಯನ ದೇಹದ ಮೇಲಿರುವ ಗುರುತ್ವಾಕಾರ್ಷಕ ಶಕ್ತಿ 1gಯಷ್ಟಿದ್ದರೆ (g= force of gravity), ರಫೇಲ್ ಯುದ್ಧವಿಮಾನಗಳ ಆಗಸಕ್ಕೆ ಚಿಮ್ಮುವ ಶಕ್ತಿ 3.6gಯಿಂದ 9g ಅಷ್ಟು ಇರುತ್ತದೆ. ಯುದ್ಧವಿಮಾನಗಳ ಪೈಲಟ್‌ಗಳು ಸಂಕೀರ್ಣ ಕೆಲಸಗಳನ್ನು ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ. ಮಾನವದೇಹ ಮತ್ತು ವಿಮಾನದ ವಿನ್ಯಾಸದ ನಡುವೆ ಉತ್ತಮ ಸಾಮರಸ್ಯ ಇದ್ದರೆ ಮಾತ್ರಪರಿಣಾಮಕಾರಿಯಾಗಿ ಪೈಲಟ್‌ ತನ್ನ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳ ನಂತರವೇ ವಾಯುಪಡೆ ರಫೇಲ್ ಖರೀದಿಗೆ ಒಲವು ತೋರಿದ್ದು.

11) ಫ್ರಾನ್ಸ್‌ನ ‘ಡಸಾಲ್ಟ್‌’ಗೆ ಭಾರತದ ‘ರಿಲಯನ್ಸ್‌ ಡಿಫೆನ್ಸ್‌’ ಪಾಲುದಾರ ಸಂಸ್ಥೆಯೇ?

ಪಾಲುದಾರಿಕೆ ಎಂಥದ್ದು ಅಂತ ಗೊತ್ತಾಗ್ತಿಲ್ಲ. ಆದರೆ ಇಬ್ಬರ ನಡುವೆ ವ್ಯಾಪಾರ ಒಡಂಬಡಿಕೆ ಆಗಿರೋದು ಮಾತ್ರ ನಿಜ. ರಿಲಯನ್ಸ್‌ನಂಥ ಸುಮಾರು 70 ಕಂಪನಿಗಳೊಂದಿಗೆ ರಫೇಲ್ ವ್ಯಾಪಾರ ಒಡಂಬಡಿಕೆ ಮಾಡಿಕೊಂಡಿದೆ. ರಿಲಯನ್ಸ್ ಡಿಫೆನ್ಸ್‌ ತನ್ನ ನಾಗಪುರ ಯೋಜನೆಗೆ ಈಗಾಗಲೇ ಡಸಾಲ್ಟ್‌ ಕಂಪನಿಯ ಪಾಲುದಾರಿಕೆ ಪಡೆದುಕೊಂಡಿದೆ. ಅಂದಹಾಗೆ ರಫೇಲ್ ಮತ್ತು ರಿಲಯನ್ಸ್‌ ಡಿಫೆನ್ಸ್ ನಡುವೆ ಒಪ್ಪಂದ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿದ್ದೇ ಬೆಂಗಳೂರಿನಲ್ಲಿ ನಡೆದ ಏರ್‌ ಷೋ ಸಂದರ್ಭದಲ್ಲಿ.

12) ಅದೆಲ್ಲಾ ಸರಿ, ಡಸಾಲ್ಟ್‌ ನಮ್ಮ ಎಚ್‌ಎಎಲ್‌ನ ಬಿಟ್ಹಾಕಿದ್ದು ಯಾಕೆ ಅಂತೀನಿ?

ನಮ್ಮ ದೇಶಕ್ಕೆ ಇದು ಭಾವುಕತೆ ವಿಷಯ. ಆದರೆ ಅವರಿಗೆ ಇದು ದುಡ್ಡಿನ ಮಾತು, ಲಾಭದ ಮಾತು.ಯಾರನ್ನು ತನ್ನ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು ಅಂತ ನಿರ್ಧಾರ ಮಾಡೋದು ‘ಡಸಾಲ್ಟ್’. ಅದು ಸಂಪೂರ್ಣ ವ್ಯಾವಹಾರಿಕ ನಿರ್ಧಾರ. 2007ರ ಜಾಗತಿಕ ಟೆಂಡರ್‌ನಲ್ಲಿ ಎಚ್‌ಎಎಲ್‌ ಅನ್ನು ಪ್ರಮುಖ ಸಹವರ್ತಿ ಕಂಪನಿಯಾಗಿ ಗುರುತಿಸಲಾಗಿತ್ತು. ಈಗ ಅದನ್ನು ರದ್ದುಪಡಿಸಲಾಗಿದೆ. ಪ್ರಸ್ತುತ ಎಚ್‌ಎಎಲ್‌ ವಿಮಾನಗಳನ್ನು ಸ್ವತಂತ್ರವಾಗಿ ತಯಾರಿಸುತ್ತಿಲ್ಲ. ರಷ್ಯನ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಸೇರಿದಂತೆ ಹಲವು ವಿಮಾನ ತಯಾರಿಕಾ ಸಂಸ್ಥೆಗಳಿಂದ ವಿಮಾನ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದೆ. ಸ‌ದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಹುದು.

13) ಎಚ್‌ಎಎಲ್‌ಗೆವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲವೇ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ನೀವು ಯಾರನ್ನು ನಂಬುತ್ತೀರಿ ಎನ್ನುವುದನ್ನು ನಿರ್ಧರಿಸಿಕೊಳ್ಳಬೇಕು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ‘ಎಚ್‌ಎಎಲ್‌ಗೆ ರಫೇಲ್‌ನಂಥ ಯುದ್ಧ ವಿಮಾನ ಸಿದ್ಧಪಡಿಸುವ ಸಾಮರ್ಥ್ಯವಿಲ್ಲ’ ಎಂದು ಹೇಳಿದ್ದರು. ‘ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಚ್‌ಎಎಲ್‌ ಬಲಗೊಳಿಸುವಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿತ್ತು’ ಎಂದು ದೂರಿದ್ದರು.‘ಎಚ್‌ಎಎಲ್‌ಗೆ ಜೆಟ್ ವಿಮಾನ ತಯಾರಿಸುವ ಸಾಮರ್ಥ್ಯವಿದೆ. ಆದರೆ ಪ್ರಸ್ತಾಪಿತ ಮೌಲ್ಯದಲ್ಲಿ ಅಲ್ಲ’ ಎಂದು ಕಳೆದ ತಿಂಗಳಷ್ಟೇ ನಿವೃತ್ತರಾದ ಎಚ್‌ಎಎಲ್‌ನ ಮುಖ್ಯಸ್ಥ ಟಿ.ಸುವರ್ಣ ರಾಜು ಹೇಳಿದ್ದರು. ಯಾರನ್ನು ನಂಬುತ್ತೀರಿ ಎನ್ನುವುದು ನಿಮಗೆ ಬಿಟ್ಟ ವಿಷಯ.

14) ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕ್ವಾ ಒಲಾಂಡ್ ನೀಡಿದ್ದ ಹೇಳಿಕೆ ವಿವಾದ ಹುಟ್ಟುಹಾಕಿದ್ದು ಏಕೆ?

ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ನೀವು ಮೂರು ವರ್ಷ ಹಿಂದಿನ ಸುದ್ದಿಗಳನ್ನು ನೆನಪಿ

ಸಿಕೊಳ್ಳಬೇಕು.ನಮ್ಮ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಟೂರ್ ಮಾಡ್ತಿದ್ದಾಗ (2015ರಲ್ಲಿ) ರಫೇಲ್ ವಿಮಾನ ಖರೀದಿ ಘೋಷಣೆ ಮಾಡಿದ್ದರು. ಆಗ ಫ್ರಾನ್ಸ್ ಅಧ್ಯಕ್ಷರಾಗಿದ್ದವರು ಫ್ರಾಂಕ್ವಾ ಒಲಾಂಡ್.‘ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಸಹವರ್ತಿಯಾಗಿ ಮಾಡಿಕೊಳ್ಳಬೇಕು ಎಂದು ಭಾರತ ಸರ್ಕಾರ ಸೂಚಿಸಿತ್ತು’ ಎಂದು ಒಲಾಂಡ್ ಈಚೆಗೆ ಹೇಳಿಕೆ ನೀಡಿದ್ದರು. ‘ಹೀಗೆ ಮಾಡುವ ಮೂಲಕ ಮೋದಿ ಅವರು ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ’ ಎಂದು ಭಾರತದ ವಿರೋಧ ಪಕ್ಷಗಳು ಟೀಕಿಸಿದ್ದವು. ನಂತರದ ದಿನಗಳಲ್ಲಿ ಒಲಾಂಡ್ ಅವರ ಹೇಳಿಕೆಯನ್ನು ಡಸಾಲ್ಟ್ ಮತ್ತು ಫ್ರಾನ್ಸ್ ಸರ್ಕಾರ ತಳ್ಳಿಹಾಕಿದ್ದವು. ‘ಸ್ವಂತ ನಿರ್ಧಾರದಿಂದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಂಡೆವು’ ಎಂದು ಡಸಾಲ್ಟ್ ಹೇಳಿತ್ತು.

15) ಒಲಾಂಡ್ ಹೇಳಿಕೆಗೆ ನಮ್ಮ ಸರ್ಕಾರದ ಪ್ರತಿಕ್ರಿಯೆ ಹೇಗಿತ್ತು?

ವಿದೇಶಿ ಮಾಧ್ಯಮಗಳಲ್ಲಿ ಒಲಾಂಡ್ ಹೇಳಿಕೆ ಸುದ್ದಿಯಾದ ನಂತರ ರಾಹುಲ್‌ಗಾಂಧಿ ಮೈಕೊಡವಿ

ಕೊಂಡು ಸರ್ಕಾರದ ಮೇಲೆ ಮುಗಿಬಿದ್ದರು. ಪ್ರಬಲ ಸಚಿವರ ಬೆಂಬಲದೊಂದಿಗೆ ಅಖಾಡಕ್ಕಿಳಿದ ಕೇಂದ್ರ ಸರ್ಕಾರ, ರಾಹುಲ್‌ಗಾಂಧಿಯ ದೇಶಭಕ್ತಿಯನ್ನೇ ಪ್ರಶ್ನಿಸಿತು.‘ರಫೇಲ್ ಒಪ್ಪಂದಕ್ಕೆಸಂಬಂಧಿಸಿದಂತೆಫ್ರಾನ್ಸ್‌ನಲ್ಲಿ ಸಧ್ಯದಲ್ಲೇ ದೊಡ್ಡ ಬಾಂಬ್ ಸಿಡಿಯಲಿದೆ’ ಎಂದುರಾಹುಲ್ ಗಾಂಧಿ ಆಗಸ್ಟ್ 30ರಂದು ಮಾಡಿದ್ದ ಟ್ವೀಟ್ ಹುಡುಕಿದ ಅರುಣ್‌ ಜೇಟ್ಲಿ, ‘ರಾಹುಲ್ ಅವರ ಟ್ವಿಟ್‌ಗೂ, ಒಲಾಂಡ್ ಅವರ ಹೇಳಿಕೆಗೂ ಸಂಬಂಧ ಇರಬಹುದು’ ಶಂಕಿಸಿದರು. ‘ವಾಯುಪಡೆಗೆ ಯುದ್ಧವಿಮಾನಗಳು ಬೇಕು. ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರಲೇಬೇಕು, ಬಂದೇಬರುತ್ತವೆ’ ಎಂದು ಹೇಳಿದರು. ಜೇಟ್ಲಿ ಹೇಳಿಕೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪುನರುಚ್ಚರಿಸಿದರು. ಎಲ್ಲರೂ ಇದನ್ನೇ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಅಂದುಕೊಂಡರು.

16) ನಮ್ಮವರು ಫ್ರಾನ್ಸ್‌ ಜೊತೆಗೆ ಅದೆಂಥ ಒಪ್ಪಂದ ಮಾಡಿಕೊಂಡಿದ್ದಾರೆ?

ಭಾರತ–ಫ್ರಾನ್ಸ್ ದೇಶಗಳ ನಡುವೆ ಎರಡು ಹಂತದ ಒಪ್ಪಂದವಾಗಿದೆ. ಮೊದಲ ಹಂತದಲ್ಲಿ ಡಸಾಲ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವೆ. ಎರಡನೇ ಹಂತದಲ್ಲಿ ಭಾರತ ಮತ್ತು ಫ್ರಾನ್ಸ್‌ ಸರ್ಕಾರದ ನಡುವೆ ಅಂತರ್‌–ಸರ್ಕಾರಿ ಒಪ್ಪಂದವಾಗಿದೆ. ಅಂತರ್–ಸರ್ಕಾರಿ ಒಪ್ಪಂದವು ಡಸಾಲ್ಟ್ ಕಂಪನಿಯೊಂದಿಗಿನ ಒಪ್ಪಂದದ ರೂಪುರೇಷೆಗಳ ಬಾಧ್ಯತೆಯನ್ನು ಒಳಗೊಂಡಿದೆ. ಅಂದರೆ ಡಸಾಲ್ಟ್ ಕಂಪನಿ ನಮ್ಮ ದೇಶದೊಡನೆ ಮಾಡುವ ವಹಿವಾಟನ್ನು ಸರ್ಕಾರಿ ಒಪ್ಪಂದ ನಿಯಂತ್ರಿಸುತ್ತದೆ.

17) ಅನಿಲ್‌ ಅಂಬಾನಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಎಚ್‌ಎಎಲ್‌ಗೆ ಮೋಸ ಮಾಡ್ತಾ?

ವಿರೋಧ ಪಕ್ಷಗಳು ಹಾಗೆ ಹೇಳ್ತಿವೆ.ಸರ್ಕಾರ ಹೇಳುವ ಪ್ರಕಾರ, ಡಸಾಲ್ಟ್‌ ಕಂಪನಿ ಜೊತೆ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯ ಸಹಯೋಗ ಇನ್ನೂ ಔಪಚಾರಿಕವಾಗಿ ಅಂತಿಮಗೊಂಡಿಲ್ಲ.ಎರಡೂ ಕಂಪನಿಗಳು ವ್ಯಾವಹಾರಿಕ ಯೋಜನೆಗಳನ್ನು ಇನ್ನೂ ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ. ಯಾವುದೇ ಕಂಪನಿಗಳು ವ್ಯಾಪಾರ ಆರಂಭಿಸುವ ಮೊದಲು ತಮ್ಮತಮ್ಮ ಸರ್ಕಾರಗಳಿಗೆ ಒಪ್ಪಂದದ ವಿಧಿಗಳನ್ನು ವಿವರಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.