ADVERTISEMENT

ಪ್ರಧಾನಿ ಮೋದಿ ಭ್ರಷ್ಟ, ರಫೇಲ್ ಹಗರಣ ಬಗ್ಗೆ ಸ್ಪಷ್ಟನೆ ನೀಡಲಿ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 12:22 IST
Last Updated 22 ಸೆಪ್ಟೆಂಬರ್ 2018, 12:22 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ರಫೇಲ್ ಹಗರಣ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟ ಎಂದಿದ್ದಾರೆ.ಶನಿವಾರ ಸುದ್ದಿಗೋಷ್ಠಿ ನಡೆಸಿದ ರಾಹುಲ್ರಫೇಲ್ ಹಗರಣದ ಬಗ್ಗೆ ಕೇಳಿ ಬರುತ್ತಿರುವ ವಾದ-ವಿವಾದಗಳ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೋದಿ ಭ್ರಷ್ಟ ಎಂಬುದು ಗೊತ್ತಾಗಿದೆ.ದೇಶದ ಚೌಕೀದಾರ್ ಈಗ ಕಳ್ಳ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಹೇಳಿದ್ದಾರೆ.

ಡಸಾಲ್ಟ್‌ ಕಂಪನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇ ದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಹೇಳಿರುವುದಾಗಿ ಫ್ರಾನ್ಸ್ ನ ‘ಮಿಡಿಯಾಪಾರ್ಟ್‌' ವರದಿ ಮಾಡಿತ್ತು. ಇದನ್ನು ಪ್ರಸ್ತಾಪಿಸಿದ ರಾಹುಲ್, ಪ್ರಧಾನಿ ಮೋದಿ ಅವರು ಒಲಾಂಡ್ ಅವರ ಹೇಳಿಕೆಯನ್ನು ಒಪ್ಪಬೇಕು ಇಲ್ಲವೇ ಅವರು ಸುಳ್ಳು ಹೇಳುತ್ತಿದ್ದರೆ ಸತ್ಯ ಯಾವುದು ಎಂದು ಹೇಳಬೇಕು.

ADVERTISEMENT

ರಕ್ಷಣಾ ಸಚಿವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.ಇವರೆಲ್ಲರೂ ಮೋದಿಯನ್ನು ಕಾಪಾಡಲು ನೋಡುತ್ತಿದ್ದಾರೆ. ಈ ಹಗರಣ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರೂಪಿಸಬೇಕು.ಮಾಜಿ ಫ್ರೆಂಚ್ ಅಧ್ಯಕ್ಷ ಒಲಾಂಡ್ ಅವರನ್ನೂ ಕರೆಯಬೇಕು ಎಂದಿದ್ದಾರೆ ರಾಹುಲ್.

ಮಾಧ್ಯಮ ವರದಿಯಲ್ಲೇನಿದೆ?
ರಫೇಲ್‌ ಒಪ್ಪಂದದಲ್ಲಿ ದೇಶೀ ಪಾಲುದಾರನಾಗಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ವಿಚಾರದಲ್ಲಿ ನಮಗೆ ಯಾವುದೇ ಆಯ್ಕೆ ಇರಲಿಲ್ಲ. ಈ ಕಂಪನಿಯನ್ನು (ರಿಲಯನ್ಸ್‌ ಡಿಫೆನ್ಸ್‌) ಪಾಲುದಾರನಾಗಿ ಸೇರಿಸಿಕೊಳ್ಳುವಂತೆ ಭಾರತ ಸರ್ಕಾರ ಹೇಳಿತು. ಹಾಗಾಗಿ ಅನಿಲ್‌ ಅಂಬಾನಿ ಜತೆಗೆ ಡಸಾಲ್ಟ್‌ ಕಂಪನಿ ಮಾತುಕತೆ ನಡೆಸಿತು. ಯಾರ ಜತೆಗೆ ಮಾತನಾಡಬೇಕು ಎಂದು ಹೇಳಿದ್ದರೋ ಅವರ ಜತೆಗಷ್ಟೇ ನಾವು ಮಾತುಕತೆ ನಡೆಸಿದೆವು’ ಎಂದು ಒಲಾಂಡ್‌ ಹೇಳಿದ್ದಾಗಿ ‘ಮಿಡಿಯಾಪಾರ್ಟ್‌’ ವರದಿ ಮಾಡಿದೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.