ನವದೆಹಲಿ: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರ ಸಂಗಾತಿ ಜೂಲಿ ಗಯೆಟ್ ನಿರ್ಮಿಸಿರುವ ಟೌಟ್ ಲಾ–ಹೌಟ್ ಸಿನಿಮಾಕ್ಕೆ ಶೇ 15ರಷ್ಟು ಹಣಕಾಸು ನೆರವು ನೀಡಿದ್ದಾಗಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ದೃಢಪಡಿಸಿದೆ.
ಫ್ರಾನ್ಸ್‌ನಲ್ಲಿರುವ ಪಾಲುದಾರ ಕಂಪೆನಿ ವಿಸ್‌ವೈರ್ಸ್ ಕ್ಯಾಪಿಟಲ್ ಮೂಲಕ ಸಿನಿಮಾ ನಿರ್ಮಾಣಕ್ಕಾಗಿ14.8 ಲಕ್ಷ ಯುರೋ(ಈಗಿನ ವಿನಿಮಯ ದರದ ಪ್ರಕಾರ ₹12.56 ಕೋಟಿ) ನೆರವು ನೀಡಿದ್ದಾಗಿ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2017ರ ಡಿಸೆಂಬರ್ 20ರಂದು ಸಿನಿಮಾ ಬಿಡುಗಡೆಯಾಗಿತ್ತು. ಅದಕ್ಕೂ ಎರಡು ವಾರ ಮೊದಲು, ಅಂದರೆ ಡಿಸೆಂಬರ್ 5ರಂದು ಹಣ ನೀಡಲಾಗಿತ್ತು ಎಂದು ಕಂಪೆನಿ ಹೇಳಿದೆ.
ಸಿನಿಮಾ ಹೊರತಾಗಿ ವಿಸ್‌ವೈರ್ಸ್ ಕ್ಯಾಪಿಟಲ್ ಜತೆ ರಿಲಯನ್ಸ್ ಸಮೂಹ ಅನೇಕ ಹೂಡಿಕೆಗಳನ್ನು ಮಾಡಿದೆ. ಸಿನಿಮಾಗೆ ಹೂಡಿಕೆ ಮಾಡುವುದಕ್ಕೂ ಮುನ್ನ ಸೂಲಾ ವೈನ್ಸ್ ಮತ್ತು ಗ್ರೋವರ್ ವೈನ್‌ಯಾರ್ಡ್ಸ್‌ನಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಂಬಾನಿಯವರ ದೀರ್ಘಕಾಲದ ಸ್ನೇಹಿತ, ಭಾರತೀಯ ಮೂಲದ ರವಿ ವಿಶ್ವನಾಥನ್ ಎಂಬುವವರು ವಿಸ್‌ವೈರ್ಸ್ ಕ್ಯಾಪಿಟಲ್ ಸ್ಥಾಪಕರಾಗಿದ್ದಾರೆ.
‘ಜೂಲಿ ಗಯೆಟ್ ಅಥವಾ ಅವರ ಕಂಪೆನಿ ರೂಜ್ ಇಂಟರ್‌ನ್ಯಾಷನಲ್ ಜತೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ನಂಬರ್ ಒನ್ ಹೆಸರಿನ ಸಿನಿಮಾಗೆ ಸಂಬಂಧಿಸಿ ನೇರವಾಗಿ ಹಣವನ್ನೂ ನೀಡಿಲ್ಲ’ ಎಂದು ಕಂಪೆನಿಯ ವಕ್ತಾರರ ಹೇಳಿಕೆಯನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಸಿನಿಮಾ ಟೈಟಲ್ ಆರಂಭದಲ್ಲಿ ‘ನಂಬರ್ ಒನ್’ ಎಂಬ ಹೆಸರಿನಲ್ಲಿದ್ದು, ನಂತರ ಟೌಟ್ ಲಾ–ಹೌಟ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ಲಡಾಖ್‌ನಂತಹ ದುರ್ಗಮ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ನೆರವಾಗಿದ್ದಕ್ಕಾಗಿ ಫ್ರಾನ್ಸ್‌ನ ನಿರ್ಮಾಪಕರಿಂದ ಸುಮಾರು ಎರಡೂವರೆ ಕೋಟಿ ರೂಪಾಯಿ ಸ್ವೀಕರಿಸಿದ್ದಾಗಿಯೂ ಅಂಬಾನಿ ಒಡೆತನದ ಕಂಪೆನಿ ಹೇಳಿಕೊಂಡಿದೆ. ಫ್ರಾನ್ಸ್ ಹೊರತುಪಡಿಸಿ ನೇಪಾಳ ಮತ್ತು ಲಡಾಖ್‌ನಲ್ಲಿ ಸಿನಿಮಾದ ಚಿತ್ರೀಕರಣ ನೆರವೇರಿತ್ತು.
ಗಯೆಟ್ ಅವರ ರೂಜ್ ಇಂಟರ್‌ನ್ಯಾಷನಲ್ ಜತೆ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿರುವುದಾಗಿ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ 2016ರ ಜನವರಿ 24ರಂದು ಘೋಷಣೆ ಮಾಡಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಕಳೆದ ತಿಂಗಳು ವರದಿ ಮಾಡಿತ್ತು. ಈ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಒಲಾಂಡ್ ರಫೇಲ್ ಯುದ್ಧವಿಮಾನ ಒಪ್ಪಂದ ಮಾಡಿಕೊಂಡಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಇದನ್ನೂ ಓದಿ:ರಫೇಲ್ ಡೀಲ್: ಮುನ್ನೆಲೆಗೆ ಬಂತು ಬೆಂಗಳೂರು ನಂಟು, ದಿನಕ್ಕೊಂದು ತಿರುವು
ಇದಕ್ಕೆ ಪ್ರತಿಕ್ರಿಯಿಸಿ ಸೆಪ್ಟೆಂಬರ್ 21ರಂದು ಫ್ರಾನ್ಸ್‌ನ ನ್ಯೂಸ್‌ಪೋರ್ಟಲ್ ಮೀಡಿಯಾಪಾರ್ಟ್‌ಗೆ ಹೇಳಿಕೆ ನೀಡಿದ್ದ ಒಲಾಂಡ್, ‘ರಫೇಲ್ ಒಪ್ಪಂದಕ್ಕೆ ಭಾರತೀಯ ಪಾಲುದಾರ ಕಂಪೆನಿಯನ್ನು ಆಯ್ದುಕೊಳ್ಳುವಲ್ಲಿ ನಮ್ಮ ಪಾತ್ರವಿಲ್ಲ. ರಿಲಯನ್ಸ್ ಸಮೂಹದ ಹೆಸರನ್ನು ಭಾರತ ಸರ್ಕಾರವೇ ಪ್ರಸ್ತಾಪಿಸಿತ್ತು. ಡಸಾಲ್ಟ್ ಕಂಪೆನಿ ಅಂಬಾನಿ ಜತೆ ಮಾತುಕತೆ ನಡೆಸಿತ್ತು’ ಎಂದು ಹೇಳಿದ್ದರು.
ಇದನ್ನೂ ಓದಿ:ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್
ಅದೇ ದಿನ ಎಎಫ್‌ಪಿ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಒಲಾಂಡ್, ‘ರಫೇಲ್ ಒಪ್ಪಂದದ ಮಾತುಕತೆ ವೇಳೆ ಹೊಸ ಸೂತ್ರದಡಿ ರಿಲಯನ್ಸ್ ಸಮೂಹದ ಹೆಸರು ಪ್ರಾಸ್ತಾಪವಾಗಿತ್ತು. ಮೋದಿ ಸರ್ಕಾರವೇ ಅದನ್ನು ನಿರ್ಧರಿಸಿತ್ತು’ ಎಂದು ಹೇಳಿದ್ದರು. ಡಸಾಲ್ಟ್ ಜತೆ ರಿಲಯನ್ಸ್ ಸಮೂಹವನ್ನೇ ಪರಿಗಣಿಸಬೇಕು ಎಂಬ ಬಗ್ಗೆ ಒತ್ತಡವಿತ್ತೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಒಲಾಂಡ್, ‘ಆ ಬಗ್ಗೆ ತಮಗೇನೂ ಗೊತ್ತಿಲ್ಲ. ಈ ಪ್ರಶ್ನೆಗೆ ಡಸಾಲ್ಟ್ ಮಾತ್ರ ಉತ್ತರಿಸಬಲ್ಲದು’ ಎಂದು ಹೇಳಿದ್ದರು.
ಇದನ್ನೂ ಓದಿ:ರಫೇಲ್ ಒಪ್ಪಂದ: ಭಾರತೀಯ ಕಂಪೆನಿ ಆಯ್ಕೆಯಲ್ಲಿ ನಮ್ಮ ಪಾತ್ರವಿಲ್ಲ ಎಂದ ಫ್ರಾನ್ಸ್
ಒಲಾಂಡ್ ಅವರ ಈ ಪ್ರತಿಕ್ರಿಯೆಯು ‘ಡಸಾಲ್ಟ್ ಮತ್ತು ರಿಲಯನ್ಸ್ ನಡುವಿನದ್ದು ಎರಡು ಖಾಸಗಿ ಸಂಸ್ಥೆಗಳ ವಾಣಿಜ್ಯ ಒಪ್ಪಂದವಾಗಿದ್ದು, ಸರ್ಕಾರದ ಪಾತ್ರವಿಲ್ಲ’ ಎಂಬ ಭಾರತ ಸರ್ಕಾರದ ವಾದಕ್ಕೆ ವಿಭಿನ್ನವಾದದ್ದಾಗಿತ್ತು.
ಹಿಂದಿನ ಯುಪಿಎ ಸರ್ಕಾರ ಮಾಡಿಕೊಂಡಿದ್ದ 126 ವಿಮಾನ ಖರೀದಿ ಒಪ್ಪಂದ ರದ್ದುಪಡಿಸಿ 36 ರಫೇಲ್ ಯುದ್ಧವಿಮಾನ ಖರೀದಿಸುವ ಒಪ್ಪಂದ ಮಾಡಿಕೊಳ್ಳುವುದಾಗಿ 2015ರ ಏಪ್ರಿಲ್ 16ರಂದು ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ವೇಳೆ ಘೋಷಿಸಲಾಗಿತ್ತು. 2016ರ ಸೆಪ್ಟೆಂಬರ್ 23ರಂದು ದೆಹಲಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಇದನ್ನೂ ಓದಿ:ಯುಪಿಎ, ಎನ್‌ಡಿಎ ಶಿಫಾರಸು ಮಾಡಿರುವ ರಿಲಯನ್ಸ್‌ಗಳು ಯಾವುವು?
ಆಫ್‌ಸೆಟ್ ಷರತ್ತಿನ (ಒಪ್ಪಂದ ಮಾಡಿಕೊಂಡ ರಾಷ್ಟ್ರದ ಕಂಪೆನಿಯಲ್ಲಿ ಹೂಡಿಕೆ ಮಾಡಬೇಕಿರುವ ನಿರ್ದಿಷ್ಟ ಪ್ರಮಾಣ) ಪ್ರಕಾರ, ಒಟ್ಟು ಮೊತ್ತದ ಶೇ 50ರಷ್ಟನ್ನು (₹30 ಸಾವಿರ ಕೋಟಿ) ಭಾರತದ ಕಂಪೆನಿಯಲ್ಲಿ ಫ್ರಾನ್ಸ್ ಹೂಡಿಕೆ ಮಾಡಬೇಕು. ಒಪ್ಪಂದದ ಪ್ರಕಾರ ಈ ಹೂಡಿಕೆ 2019ರ ಸೆಪ್ಟೆಂಬರ್‌ನಿಂದ 2023ರ ಸೆಪ್ಟೆಂಬರ್ ನಡುವೆ ನಡೆಯಬೇಕು.
ರಿಲಯನ್ಸ್ ಡಿಫೆನ್ಸ್ ಪಡೆಯುತ್ತಿರುವ ಮೊದಲ ಆಫ್‌ಸೆಟ್ ಹೂಡಿಕೆಯಾಗಿದೆ ರಫೇಲ್ ಒಪ್ಪಂದ. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಯಾವುದೇ ಅನುಭವವಿರದ, ಖಾಸಗಿ ಕಂಪೆನಿಗೆ ಮಹತ್ವದ ಒಪ್ಪಂದದ ಸಹಭಾಗಿತ್ವ ನೀಡಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.